×
Ad

ವಿಮಾನ ರೆಡಿಯಾಗಿದೆ, ಸಿಎಂ ಆಗಿ!

Update: 2018-01-28 22:18 IST

ಬಂಗಾರಪ್ಪನವರ ರಾಜೀನಾಮೆಯ ಬಳಿಕ ಮುಖ್ಯಮಂತ್ರಿಯಾಗಲು ರಾಜ್ಯದಲ್ಲಿ ಎಸ್.ಎಂ.ಕೃಷ್ಣ, ಇನ್ನೊಂದು ಕಡೆ ವೀರಪ್ಪ ಮೊಯ್ಲಿ ರೆಡಿಯಾಗಿದ್ದಾರೆ. ಅದಕ್ಕಿಂತ ಮೊದಲು ನರಸಿಂಹ ರಾಯರು ನನ್ನನ್ನು ದೆಹಲಿಗೆ ಕರೆಸಿದರು. ‘ನೀವು ನಾಳೆ ಸಿದ್ಧರಾಗಿ. ವಿಮಾನ  ಎಲ್ಲ ರೆಡಿ ಮಾಡಿದ್ದೇನೆ. ಹೋಗಿ ಮುಖ್ಯಮಂತ್ರಿ ಪದವಿ ತೆಗೆದುಕೊಳ್ಳಿ. ಡೋಂಟ್ ಟಾಕ್ ಮಚ್. ಐ ಆಮ್ ಡೈರೆಕ್ಟಿಂಗ್ ಯು. ಇಟ್ ಈಸ್ ಪಾರ್ಟೀಸ್ ಇಂಟರೆಸ್ಟ್ (ಹೆಚ್ಚು ಮಾತನಾಡಬೇಡಿ. ನಾನು ಹೇಳುತ್ತಿದ್ದೇನೆ. ಪಕ್ಷದ ಹಿತಕ್ಕಾಗಿ ನೀವು ಆಗಬೇಕು) ನಿಮ್ಮಂಥ ಪ್ರಾಮಾಣಿಕ ವ್ಯಕ್ತಿ ಮುಖ್ಯಮಂತ್ರಿಯಾಗಲೇಬೇಕು. ಇಲ್ಲದಿದ್ದರೆ ಕರ್ನಾಟಕದ ಜನತೆ ನಮ್ಮನ್ನು ನಂಬುವುದಿಲ್ಲ” ಎಂದು ನಿರ್ದೇಶನ ನೀಡಿದರು. ನಾನೆಷ್ಟು ಹೇಳಿದರೂ ಕೇಳಲಿಲ್ಲ. ‘ಐ ಡೋಂಟ್ ವಾಂಟ್ ಟು ಹಿಯರ್ ಎನಿ ಆರ್ಗ್ಯುಮೆಂಟ್’ (ನಾನು ಯಾವ ವಾದವನ್ನೂ ಕೇಳಲು ಇಚ್ಛಿಸುವುದಿಲ್ಲ) ಎಂದರು. ತಲೆ ಬಗ್ಗಿಸಿ ಬಂದೆ.

ಅಷ್ಟರೊಳಗೆ ಮುಖ್ಯಮಂತ್ರಿಯಾಗಲು ವೀರಪ್ಪ ಮೊಯ್ಲಿಯವರ ಲಾಬಿ ಜೋರಾಗಿತ್ತು. ಮೊಯ್ಲಿಯವರು ಕೇರಳದ ಮುಖ್ಯಮಂತ್ರಿ ಕರುಣಾಕರನ್ ಅವರ ಆಪ್ತರು. ಇವರು ಅವರನ್ನು ಹಿಡಿದರು. ಕರುಣಾಕರನ್ ಮತ್ತು ನರಸಿಂಹರಾಯರಿಗೆ ಬಹಳ ದೋಸ್ತಿ. ಕೇಂದ್ರದಲ್ಲಿ ಕೂಡ ಕರುಣಾಕರನ್ ಹೇಳಿದ ಹಾಗೆ ನಡೆಯುತ್ತಿತ್ತು. ನರಸಿಂಹ ರಾಯರು ಪ್ರಧಾನಿಯಾಗಲು ಕೂಡ ಅವರು ಬೆಂಬಲ ನೀಡಿದವರು. ರಾಜೀವ್ ಗಾಂಧಿ ತೀರಿಕೊಂಡಾಗ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ನಾನು ಎತ್ತಿದ ಪ್ರಶ್ನೆಗೆ ಹೆಚ್ಚು ಬೊಬ್ಬೆ ಹೊಡೆದವರು ಇದೇ ಕರುಣಾರನ್. ‘ಹೂ ಆರ್ ಯು’ (ಯಾರಯ್ಯಾ ನೀನು) ಅಂತ ನನ್ನನ್ನು ಪ್ರಶ್ನೆ ಮಾಡಿದ್ದರು. ಆಗ ನಾನು ಅವರಿಗೆ ನೇರವಾಗಿಯೇ- ‘ಐ ನೋ ಯು ಮಿ.ಕರುಣಾರನ್, ನಾನು ಹೇಳಬೇಕಾ ನೀವ್ಯಾರು ಅಂತ? ಶಲ್ ಐ ಓಪನ್ ಯುವರ್ ಹಿಸ್ಟರಿ (ನೀವು ಯಾರು ಅಂತ ಹೇಳಲೇ ಮಿಸ್ಟರ್ ಕರುಣಾಕರನ್, ನಿಮ್ಮ ಇತಿಹಾಸವನ್ನು ಬಯಲಿಗೆ ಎಳೆಯಲಾ?)’ ಎಂದ ನಂತರ ಅವರು ಮಾತನಾಡಲಿಲ್ಲ. ‘ಯು ಆರ್ ಫಾರ್ಗೆಟಿಂಗ್ ಗಾಂಧಿ ಫ್ಯಾಮಿಲಿ ಸೋ ಅರ್ಲಿ? ಹೂ ಈಸ್ ರೆಸ್ಪಾನ್ಸಿಬಲ್ ಫಾರ್ ಯು ಟು ಬಿಕಮ್ ಚೀಫ್ ಮಿನಿಸ್ಟರ್? ಆ್ಯಂಡ್ ಆಲ್ ದ ಪೋಸ್ಟ್ ಸ್ ಯು ಆರ್ ಹೋಲ್ಡಿಂಗ್? ಯು ಡೋಂಟ್ ಹ್ಯಾವ್ ಕರ್ಟಸಿ ಟು ಕ್ರಾಸ್ ದ ರೋಡ್ ಆಸ್ಕ್ ಹರ್ (ಸೋನಿಯಾ ಗಾಂಧಿ)? ಯು ಆರ್ ಟಾಕಿಂಗ್ ಲಾಟ್ ಆಫ್ ಥಿಂಗ್ಸ್. ಈಸ್ ಇಟ್ ನಾಟ್ (ಗಾಂಧಿ ಕುಟುಂಬವನ್ನು ಇಷ್ಟು ಬೇಗ ಮರೆತಿರಾ? ನೀವು ಮುಖ್ಯಮಂತ್ರಿ ಆಗುವುದಕ್ಕೆ ಯಾರು ಕಾರಣ ಗೊತ್ತಾ? ನೀವು ಪಕ್ಷದಲ್ಲಿ ಪಡೆದಿರುವ ಸ್ಥಾನಗಳಿಗೆ ಯಾರು ಕಾರಣ? ಒಂದು ರಸ್ತೆಯನ್ನು ದಾಟಿ ಅವರನ್ನು (ಸೋನಿಯಾ ಗಾಂಧಿ) ಕೇಳುವ ಸೌಜನ್ಯ ಇರಲಿಲ್ಲ ನಿಮಗೆ? ಎಷ್ಟೆಲ್ಲಾ ಮಾತಾಡುತ್ತೀರಿ)’ ಅಂತ ಜೋರು ಗದರಿಸಿದ್ದೆ. ಅದೇ ಕರುಣಾಕರನ್ ಆಗ ಮೊಯ್ಲಿಯವರ ಬೆಂಬಲಕ್ಕೆ ನಿಂತಿದ್ದರು.

‘ಒಂದು ವೇಳೆ ಮೊಯ್ಲಿಯವರನ್ನು ಮುಖ್ಯಮಂತ್ರಿ ಮಾಡದಿದ್ದರೆ ನಾನು ನಿಮ್ಮ ವಿರುದ್ಧವೇ ಹೋಗಬೇಕಾಗುತ್ತದೆ’ ಅಂತ ಕರುಣಾಕರನ್, ನರಸಿಂಹರಾಯರಿಗೆ ಎಚ್ಚರಿಕೆ ನೀಡಿದರು. ಹಾಗಾಗಿ ನರಸಿಂಹರಾಯರು ಅವರ ಮಾತಿಗೆ ಬೆಂಬಲ ಸೂಚಿಸಿದರು. ಆದರೆ ನಿಜವಾಗಿಯೂ ಶಾಸಕರ ಬೆಂಬಲ ಇದ್ದದ್ದು ಎಸ್.ಎಂ.ಕೃಷ್ಣರಿಗೆ. ವೀರಪ್ಪ ಮೊಯ್ಲಿಯವರ ಲಾಬಿಯಿಂದಾಗಿ ಎಲ್ಲವೂ ತಲೆಕೆಳಗಾಯಿತು. ‘ನಾನು ಮುಖ್ಯಮಂತ್ರಿಯಾಗುವುದಿಲ್ಲ’ ಅಂತ ಹೇಳಿದ್ದರೂ ನನ್ನನ್ನೇ ಕರ್ನಾಟಕಕ್ಕೆ ಕಳುಹಿಸಲು ವಿಮಾನ ಎಲ್ಲ ತಯಾರಾಗಿತ್ತು. ಇದರ ನಡುವೆ ಇಷ್ಟೆಲ್ಲ ರಾಜಕೀಯ ತಂತ್ರಗಾರಿಕೆ ನಡೆದುಬಿಟ್ಟಿತ್ತು.

ಬೆಳಗ್ಗೆ 11 ಗಂಟೆಗೆ ನನಗೆ ಫೋನ್ ಕರೆ-‘ವಿಮಾನ ರದ್ದಾಗಿದೆ, ನೀವು ಮುಖ್ಯಮಂತ್ರಿಯಾಗುವ ಕಾರ್ಯಕ್ರಮ ಕೂಡ ರದ್ದಾಗಿದೆ’ ಅಂತ ಹೇಳಿದರು. ನಾನು ಬಿಡುಗಡೆಯಾದೆನಲ್ಲ ಅಂತ ದೇವರಿಗೆ ಕೈಮುಗಿದೆ. ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾದದ್ದು ಹೀಗೆ. ಆದರೆ ಅವರಿಗೆ ಯಾವ ಶಾಸಕರ ಬೆಂಬಲವೂ ಇರಲಿಲ್ಲ. ಶಾಸಕರೆಲ್ಲ ಹೋಗಿ ಮತ ಹಾಕುತ್ತಿದ್ದರೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗುತ್ತಿದ್ದರು.

ಬಿ.ಜನಾರ್ದನ ಪೂಜಾರಿಯವರ ಆತ್ಮಕಥೆ ‘ಸಾಲಮೇಳದ ಸಂಗ್ರಾಮ’ದ ಆಯ್ದ ಭಾಗಗಳು

ಪ್ರಕಾಶಕರು: ಸಂತೋಷ್ ಕುಮಾರ್ ಪೂಜಾರಿ ಮತ್ತು ದೀಪಕ್ ಪೂಜಾರಿ, ಚೆನ್ನಮ್ಮ ಕುಟೀರ, ಬಂಟ್ವಾಳ ಮೂಡ ಗ್ರಾಮ, ಬಿ.ಸಿ.ರೋಡ್ ಅಂಚೆ, ಜೋಡುಮಾರ್ಗ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ, ಪಿನ್: 574219

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News