ಪದ್ಮ ಪ್ರಶಸ್ತಿ ಆಯ್ಕೆ ಈಗ ಪಾರದರ್ಶಕ: ಪ್ರಧಾನಿ

Update: 2018-01-29 11:55 GMT

ಹೊಸದಿಲ್ಲಿ, ಜ. 28: ಪದ್ಮ ಪ್ರಶಸ್ತಿ ಆಯ್ಕೆಯನ್ನು ಪಾರದರ್ಶಕಗೊಳಿಸಲಾಗಿದೆ ಹಾಗೂ ದೊಡ್ಡ ನಗರಗಳಲ್ಲಿ ಕಂಡು ಬರದ ಆದರೆ, ಸಮಾಜ ಪರಿವರ್ತನೆಗೆ ಕೆಲಸ ಮಾಡಿದ ಸಾಮಾನ್ಯ ಜನರಿಗೆ ಲಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

2018ರಲ್ಲಿ ತನ್ನ ಮೊದಲ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಅವರು, ದೊಡ್ಡ ನಗರಗಳಲ್ಲಿ ವಾಸಿಸದ, ದಿನಪತ್ರಿಕೆ ಹಾಗೂ ಟಿವಿಗಳಲ್ಲಿ ಕಾಣಿಸಿಕೊಳ್ಳದ ಜನರಿಗೆ ಈ ಬಾರಿ ಪದ್ಮ ಪ್ರಶಸ್ತಿ ನೀಡಲಾಗಿದೆ ಎಂದರು.

 ವ್ಯಕ್ತಿಯ ಗುರುತಿಗಿಂತ ಅವರು ಮಾಡಿದ ಕೆಲಸಕ್ಕೆ ಸರಕಾರ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡುವ ಹಳೆಯ ವಿಧಾನ ಬದಲಾಯಿಸಲಾಗಿದೆ. ಇದನ್ನು ಹೆಚ್ಚು ಪಾರದರ್ಶಕ ಗೊಳಿಸಲಾಗಿದೆ. ಈಗ ಪದ್ಮ ಪ್ರಶಸ್ತಿಗೆ ಯಾವುದೇ ವ್ಯಕ್ತಿಯನ್ನು ಯಾರು ಕೂಡ ಆನ್‌ಲೈನ್ ಮೂಲಕ ನಾಮನಿರ್ದೇಶಿಸಬಹುದು ಎಂದರು.

 ಪದ್ಮ ಪ್ರಶಸ್ತಿ ಗೌರವಾನ್ವಿತರನ್ನು ನೋಡಿದರೆ, ನಮ್ಮ ಸಮಾಜದಲ್ಲಿ ಇಂತಹ ವ್ಯಕ್ತಿಗಳು ಇರುವುದಕ್ಕೆ ಹಾಗೂ ಯಾವುದೇ ಶಿಫಾರಸು ಇಲ್ಲದೆ ಇಂತವರು ಪದ್ಮ ಪ್ರಶಸ್ತಿಗೆ ಆಯ್ಕೆ ಆಗಿರುವುದಕ್ಕೆ ನಿಮಗೆ ಸಹಜವಾಗಿ ಹೆಮ್ಮೆ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪದ್ಮ ಪ್ರಶಸ್ತಿ ಬಗ್ಗೆ ನೀವು ಓದಿದ ಬಳಿಕ ನೀವೆಲ್ಲರೂ ಹೆಮ್ಮೆ ಪಟ್ಟುಕೊಳ್ಳುತ್ತೀರಿ ಎಂದು ನನಗೆ ಖಾತರಿ ಇದೆ ಎಂದು ಅವರು ನುಡಿದರು.

ಪದ್ಮ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಕೆಲವರ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ, ಪದ್ಮಪ್ರಶಸ್ತಿ ವಿಜೇತರನ್ನು ಶಾಲೆ ಕಾಲೇಜುಗಳಿಗೆ ಆಹ್ವಾನಿಸಬೇಕು. ಆಗ ಅವರು ತಮ್ಮ ಅನುಭವ ಹಂಚಿಕೊಳ್ಳಲು ಅವಕಾಶ ನೀಡಬೇಕು. ಇದರಿಂದ ಅವರು ಇತರರಿಗೆ ಪ್ರೇರಣೆಯಾಗಬಲ್ಲರು ಎಂದರು.

  ಅವರು ನಾಟಿ ವೈದ್ಯ ಕೇರಳದ ಬುಡಕಟ್ಟು ಮಹಿಳೆ ಲಕ್ಷ್ಮೀಕುಟ್ಟಿ ಅಮ್ಮಾ ಹಾಗೂ ತ್ಯಾಜ್ಯದಿಂದ ಮಕ್ಕಳ ವೈಜ್ಞಾನಿಕ ಆಟಿಕೆಗಳನ್ನು ತಯಾರಿಸುವ ಐಐಟಿ ಕಾನ್ಪುರದ ಅರವಿಂದ ಗುಪ್ತಾ ಸೇರಿದಂತೆ ಈ ವರ್ಷ ಪದ್ಮ ಪ್ರಶಸ್ತಿ ಪಡೆದ ಹಲವರನ್ನು ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News