ಪಂಜಾಬ್ ಪಾಲಾದ ಕ್ರಿಸ್ ಗೇಲ್

Update: 2018-01-28 18:14 GMT

ವೆಸ್ಟ್‌ಇಂಡೀಸ್ ಸೂಪರ್‌ಸ್ಟಾರ್ ಕ್ರಿಸ್ ಗೇಲ್‌ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮೂಲ ಬೆಲೆ 2 ಕೋ.ರೂ.ಗೆ ಖರೀದಿಸಿದೆ. ಹರಾಜಿನಲ್ಲಿ ಗೇಲ್ ಹೆಸರು ಎರಡು ಬಾರಿ ಪ್ರಸ್ತಾಪವಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಸಹಿತ ಯಾವ ತಂಡಗಳು ಅವರನ್ನು ಖರೀದಿಸಲು ಮುಂದಾಗಲಿಲ್ಲ. ಮರು ಕರೆ ನೀಡಬಯಸುವ 15 ಆಟಗಾರರ ಪಟ್ಟಿ ಸಲ್ಲಿಸುವಂತೆ ಹರಾಜುಗಾರ ರಿಚರ್ಡ್ ಮಿಡ್ಲೆ ಎಲ್ಲ ಫ್ರಾಂಚೈಸಿಗಳಿಗೆ ಸೂಚಿಸಿದರು. 15 ಆಟಗಾರರ ಪಟ್ಟಿಯಲ್ಲಿ ಗೇಲ್ ಹೆಸರಿತ್ತು. ಅಂತಿಮವಾಗಿ ಪಂಜಾಬ್ ತಂಡ ಗೇಲ್‌ರನ್ನು ಖರೀದಿಸಿತು.

ಗೇಲ್ ಇತ್ತೀಚೆಗೆ ಕೊನೆಗೊಂಡ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಕೇವಲ 69 ಎಸೆತಗಳಲ್ಲಿ ಔಟಾಗದೆ 168 ರನ್ ಗಳಿಸಿದ್ದರು. ಗೇಲ್ 2008ರಲ್ಲಿ ಹೊಸದಿಲ್ಲಿಯಲ್ಲಿ ಕೋಲ್ಕತಾ ಪರ ಡೆಲ್ಲಿ ವಿರುದ್ಧ ಚೊಚ್ಚಲ ಐಪಿಎಲ್ ಆಡಿದ್ದರು.

►ಮೂಲ ಬೆಲೆಗಿಂತ 31 ಪಟ್ಟು ಹೆಚ್ಚು ಮೊತ್ತಕ್ಕೆ ಹರಾಜಾದ ಗೌತಮ್

 ಕರ್ನಾಟಕದ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ 2ನೇ ದಿನದ ಹರಾಜಿನಲ್ಲಿ ಗಮನ ಸೆಳೆದಿದ್ದು 6.20 ಕೋ.ರೂ.ಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾದರು. 20 ಲಕ್ಷ ರೂ. ಮೂಲಬೆಲೆ ಹೊಂದಿದ್ದ ಗೌತಮ್ 31 ಪಟ್ಟು ಹೆಚ್ಚು ಬೆಲೆಗೆ ಹರಾಜಾಗಿದ್ದಾರೆ.

ಗೌತಮ್‌ರನ್ನು ಕಳೆದ ವರ್ಷ ಮುಂಬೈ ತಂಡ 2 ಕೋ.ರೂ.ಗೆ ಖರೀದಿಸಿತ್ತು. ಆದರೆ, ಅವರಿಗೆ ಆಡಲು ಅವಕಾಶ ಸಿಗಲಿಲ್ಲ. ಈತನಕ 27 ಟ್ವೆಂಟಿ-20 ಆಡಿರುವ ಗೌತಮ್ 310 ರನ್ ಹಾಗೂ 20 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇತ್ತೀಚೆಗೆ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬೈ ವಿರುದ್ಧ ಆರು ವಿಕೆಟ್ ಗೊಂಚಲು ಕಬಳಿಸಿ ಕರ್ನಾಟಕಕ್ಕೆ ಗೆಲುವು ತಂದಿದ್ದರು.

ಆಸ್ಟ್ರೇಲಿಯದ ವೇಗದ ಬೌಲರ್ ಆ್ಯಂಡ್ರೂ ಟೈ 7.2 ಕೋ.ರೂ.ಗೆ ಪಂಜಾಬ್ ತಂಡಕ್ಕೆ ಸೇರ್ಪಡೆಯಾದರು.

ಭಾರತದ ಆರಂಭಿಕ ಆಟಗಾರ ಎಂ.ವಿಜಯ್(2 ಕೋ.ರೂ. ಚೆನ್ನೈ), ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್(1.7 ಕೋ.ರೂ., ಆರ್‌ಸಿಬಿ), ಆಸ್ಟ್ರೇಲಿಯದ ವೇಗಿ ಮಿಚೆಲ್ ಜಾನ್ಸನ್(2 ಕೋ.ರೂ., ಕೆಕೆಆರ್) ಎರಡನೇ ಸುತ್ತಿನಲ್ಲಿ ವಿವಿಧ ಫ್ರಾಂಚೈಸಿಗಳಿಂದ ಖರೀದಿಸಲ್ಪಟ್ಟರು.

►ಅಫ್ಘಾನಿಸ್ತಾನದ ನಾಲ್ವರಿಗೆ ಅವಕಾಶ: ಕಳೆದ ವರ್ಷ ಅಫ್ಘಾನಿಸ್ತಾನದ ಇಬ್ಬರು ಆಟಗಾರರು ಐಪಿಎಲ್‌ನಲ್ಲಿ ಅವಕಾಶ ಪಡೆದಿದ್ದರು. ಈ ಬಾರಿ ನಾಲ್ವರು ಅವಕಾಶ ಪಡೆದಿದ್ದಾರೆ. ಅವರುಗಳೆಂದರೆ: ಮುಹಮ್ಮದ್ ನಬಿ(1 ಕೋ.ರೂ. ಹೈದರಾಬಾದ್), ಅಂಡರ್-19 ವಿಶ್ವಕಪ್‌ನಲ್ಲಿ ಆಡುತ್ತಿರುವ ಮುಜೀಬ್ ಝದ್ರಾನ್, ಝಹೀರ್ ಖಾನ್ ಹಾಗೂ ರಶೀದ್ ಖಾನ್.

ನೇಪಾಳ ಆಟಗಾರ ಸಂದೀಪ್ ಪ್ರವೇಶ !

ನೇಪಾಳದ ಲೆಗ್ ಸ್ಪಿನ್ನರ್ ಸಂದೀಪ್ ಲಮಿಚ್ಚಾನೆ 2018ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಮೂಲ ಬೆಲೆ 20 ಲಕ್ಷ ರೂ.ಗೆ ಬಿಕರಿಯಾದರು. ಸಂದೀಪ್ ಹರಾಜಿನಲ್ಲಿ ಮಾರಾಟಗೊಂಡ ನೇಪಾಳದ ಮೊದಲ ಆಟಗಾರ ಎನಿಸಿಕೊಂಡರು. 17ರ ಹರೆಯದ ಸಂದೀಪ್ 2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಐರ್ಲೆಂಡ್‌ನ ವಿರುದ್ಧ ನೇಪಾಳ ಪರ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಬೆಳಕಿಗೆ ಬಂದಿದ್ದರು. ಐರ್ಲೆಂಡ್‌ನ್ನು ಸೋಲಿಸಿದ್ದ ನೇಪಾಳ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿತ್ತು. ಟೂರ್ನಿಯಲ್ಲಿ ಒಟ್ಟು 14 ವಿಕೆಟ್‌ಗಳನ್ನು ಕಬಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News