ಶೂಟೌಟ್‌ನಲ್ಲಿ ಬೆಲ್ಜಿಯಂಗೆ ಶರಣಾದ ಭಾರತ

Update: 2018-01-28 18:27 GMT

ಹ್ಯಾಮಿಲ್ಟನ್(ನ್ಯೂಝಿಲೆಂಡ್), ಜ.28: ಚತುರ್ರಾಷ್ಟ್ರ ಆಹ್ವಾನಿತ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ವಿಶ್ವದ ನಂ.3ನೇ ತಂಡ ಬೆಲ್ಜಿಯಂ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲುಂಡಿದೆ.

ರವಿವಾರ ನಡೆದ ಎರಡನೇ ಹಂತದ ಟೂರ್ನಿಯ ಫೈನಲ್‌ನಲ್ಲಿ ಉಭಯ ತಂಡಗಳು ನಿಯಮಿತ ಸಮಯದಲ್ಲಿ 4-4 ರಿಂದ ಸಮಬಲ ಸಾಧಿಸಿದವು. ಆಗ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.

ಶೂಟೌಟ್ ಸುತ್ತಿನಲ್ಲಿ ಬೆಲ್ಜಿಯಂ ಪರ ಫೆಲಿಕ್ಸ್ ಡೆನಾಯೆರ್, ಸೆಬಾಸ್ಟಿಯನ್ ಡಾಕಿಯೆರ್ ಹಾಗೂ ಅರ್ಥರ್ ವ್ಯಾನ್ ಡೊರೆನ್ ಗೋಲು ಬಾರಿಸಿದರು.

ನಿಗದಿತ ಸಮಯದಲ್ಲಿ ಬೆಲ್ಜಿಯಂ ಪರ ಟಾಂಗೈ ಕಾಸಿನ್ಸ್(41ನೇ ನಿ.), ಸೆಡ್ರಿಕ್ ಚಾರ್ಲಿಯರ್(43ನೇ ನಿ.), ಅವೌರಿ ಕೀಸ್ಟರ್ಸ್‌(51ನೇ ನಿ.) ಹಾಗೂ ಫೆಲಿಕ್ಸ್ ಡೆನಿಯೆರ್(56ನೇನಿ.) ತಲಾ ಒಂದು ಗೋಲು ಬಾರಿಸಿದರು.

ಭಾರತದ ಪರ ರಮನ್‌ದೀಪ್ ಸಿಂಗ್(29ನೇ, 53ನೇ) ಅವಳಿ ಗೋಲು ಬಾರಿಸಿದರೆ, ನೀಲಕಂಠ ಶರ್ಮ(42ನೇ ನಿ.) ಹಾಗೂ ಮನ್‌ದೀಪ್ ಸಿಂಗ್(49 ನೇ ನಿ.)ತಲಾ ಒಂದು ಗೋಲು ಬಾರಿಸಿದರು.

ಇದಕ್ಕೆ ಮೊದಲು ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜಪಾನ್ ಹಾಗೂ ಆತಿಥೇಯ ನ್ಯೂಝಿಲೆಂಡ್ 1-1 ರಿಂದ ಸಮಬಲ ಸಾಧಿಸಿದವು. ಪೆನಾಲ್ಟಿ ಶೂಟೌಟ್‌ನಲ್ಲಿ ಜಪಾನ್ 4-1 ರಿಂದ ಜಯ ಸಾಧಿಸುವ ಮೂಲಕ ಕಂಚು ಜಯಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News