ಶೀಘ್ರವೇ ಪೊಲೀಸ್ ಕವಾಯತು ಕನ್ನಡದಲ್ಲಿ ಆರಂಭ: ಡಾ.ರವಿಕಾಂತೇ ಗೌಡ

Update: 2018-01-29 08:36 GMT

ಮಂಗಳೂರು, ಜ.29: ಸದ್ಯ ಹಿಂದಿ ಅಥವಾ ಆಂಗ್ಲ ಭಾಷೆಯಲ್ಲಿರುವ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕವಾಯತು ಅನ್ನು ರಾಜ್ಯಾದ್ಯಂತ ಕನ್ನಡದಲ್ಲಿ ಆರಂಭಿಸುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದೆ. ಆ ಸಮಿತಿಯಲ್ಲಿ ತಾನೂ ಒಬ್ಬ ಸದಸ್ಯನಾಗಿದ್ದು, ಸಮಿತಿ ಸಭೆಯು ಮುಂದಿನ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಶೀಘ್ರವೇ ರಾಜ್ಯದಲ್ಲಿ ಕನ್ನಡದಲ್ಲಿಯೇ ಕವಾಯತು ಪ್ರಕ್ರಿಯೆ ಆರಂಭವಾಗಲಿದೆ ಎಂದು ದ.ಕ. ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್.ರವಿಕಾಂತೇ ಗೌಡ ತಿಳಿಸಿದರು.

ದ.ಕ. ಜಿಲ್ಲೆಯ ನೂತನ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕವಾಯತು ಪ್ರಕ್ರಿಯೆಗಳು ಹಿಂದಿ ಅಥವಾ ಆಂಗ್ಲ ಭಾಷೆಯಲ್ಲಿದ್ದು, ಬೆಳಗಾವಿಯಲ್ಲಿ 2016ರ ಜನವರಿ 26ರಂದು ಈ ಪ್ರಕ್ರಿಯೆಯನ್ನು ಕನ್ನಡದಲ್ಲಿ ಆರಂಭಿಸಲಾಗಿದೆ. ಇದರ ಡಿವಿಡಿ ತಯಾರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ನವೆಂಬರ್ 22ರ 2017ರಂದು ಮುಖ್ಯಮಂತ್ರಿ ಇದನ್ನು ಬಿಡುಗಡೆಗೊಳಿಸಿದ್ದಾರೆ. ಇದೀಗ ರಾಜ್ಯಾದ್ಯಂತ ಕವಾಯತು ಕನ್ನಡದಲ್ಲಿ ಆರಂಭಿಸುವ ನಿಟ್ಟಿನಲ್ಲಿ ಸಮಿತಿ ರಚನೆ ಆಗಿದೆ. ಆ ಸಮಿತಿಯಲ್ಲಿ ತಾನೂ ಒಬ್ಬ ಸದಸ್ಯರಾಗಿದ್ದು, ಸಮಿತಿ ಸಭೆಯು ಮುಂದಿನ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಶೀಘ್ರದಲ್ಲೇ ರಾಜ್ಯದಲ್ಲಿ ಕನ್ನಡದಲ್ಲಿಯೇ ಕವಾಯತು ಪ್ರಕ್ರಿಯೆ ಆರಂಭವಾಗಲಿದೆ. ದ.ಕ. ಜಿಲ್ಲೆಯಲ್ಲೂ ಈ ನಿಟ್ಟಿನಲ್ಲಿ ಕನ್ನಡದಲ್ಲಿ ಕವಾಯತು ಆರಂಭಕ್ಕೆ ಕ್ರಮ ವಹಿಸುವುದಾಗಿ ಅವರು ಹೇಳಿದರು.

ಸುಧಾರಿತ ಗಸ್ತು ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬೆಳಗಾವಿಯಲ್ಲಿ ಆರಂಭಿಸಲಾಗಿದ್ದು, ಇದೀಗ ಕರ್ನಾಟಕದಲ್ಲಿ ಇದನ್ನು ಜಾರಿಗೊಳಿಸಲಾಗಿದೆ ಎಂದು ಕರಾವಳಿ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಪ್ರಥಮವಾಗಿ ಸೇವೆಗೆ ನಿಯುಕ್ತರಾಗಿರುವ ಡಾ. ರವಿಕಾಂತೇಗೌಡ ತಿಳಿಸಿದರು  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News