ಉಡುಪಿ ನಗರಸಭೆ: 1.06 ಕೋಟಿ ರೂ. ಮಿಗತೆ ಬಜೆಟ್ ಮಂಡನೆ

Update: 2018-01-29 10:17 GMT

ಉಡುಪಿ, ಜ.29: ಉಡುಪಿ ನಗರಸಭೆಯ 2018-19ನೆ ಸಾಲಿನ 1.06 ಕೋಟಿ ರೂ. ಮಿಗತೆಯ ಬಜೆಟನ್ನು ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಸೋಮವಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿದ್ದಾರೆ.

28.69 ಕೋಟಿ ರೂ. ಆರಂಭ ಶಿಲ್ಕು ಮತ್ತು 62.61ಕೋಟಿ ರೂ. ಒಟ್ಟು ಸ್ವೀಕೃತಿಗಳು ಸೇರಿದಂತೆ ಒಟ್ಟು 91.30 ಕೋಟಿ ರೂ. ಆದಾಯವನ್ನು ನಿರೀಕ್ಷಿಸ ಲಾಗಿದ್ದು, 90.24 ಕೋಟಿ ರೂ. ಒಟ್ಟು ವೆಚ್ಚಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಅಂದಾಜಿಸಲಾಗಿದೆ. ಕಾಂಗ್ರೆಸ್ ಐದು ವರ್ಷಗಳ ನಗರಸಭೆ ಆಡಳಿತ ಅವಧಿಯ ಕೊನೆಯ ಬಜೆಟ್ ಇದಾಗಿದೆ.

ಆದಾಯಗಳ ಅಂದಾಜು: 14ನೆ ಕೇಂದ್ರ ಹಣಕಾಸು ಆಯೋಗದ ಅನುದಾನ 5.67 ಕೋಟಿ ರೂ., ರಾಜ್ಯ ಹಣಕಾಸು ಆಯೋಗದ ಮುಕ್ತನಿಧಿ ಅನುದಾನ 5.27 ಕೋಟಿ ರೂ., ರಾಜ್ಯ ಹಣಕಾಸು ಆಯೋಗದ ಸಿಬ್ಬಂದಿ ವೇತನ ಅನುದಾನ 4.43 ಕೋಟಿ ರೂ., ರಾಜ್ಯ ಹಣಕಾಸು ಆಯೋಗದ ವಿದ್ಯುತ್ ಬಿಲ್ ಅನುದಾನ 7.27 ಕೋಟಿ ರೂ., ಅಮೃತ ಯೋಜನೆಯ ಅನುದಾನ 75 ಲಕ್ಷ ರೂ., ಎಸ್‌ಎಫ್‌ಸಿ ವಿಶೇಷ ಅನುದಾನ 10 ಕೋಟಿ ರೂ., ಸ್ವಚ್ಛ ಭಾರತ್ ಮಿಶನ್ ಅನುದಾನ 2 ಕೋಟಿ ರೂ., ಎಸ್‌ಟಿಎಸ್‌ಪಿ/ಟಿಎಸ್‌ಪಿ ಅನುದಾನ 1.66 ಕೋಟಿ ರೂ., ಇತರ ಅನುದಾನ 55 ಲಕ್ಷ ರೂ. ನಿರೀಕ್ಷಿಸಲಾಗಿದೆ.

ನಗರಸಭೆ ಆದಾಯಗಳಾದ ಆಸ್ತಿ ತೆರಿಗೆ 11.02 ಕೋಟಿ ರೂ., ವ್ಯಾಪಾರ ಪರವಾನಿಗೆ ಮತ್ತು ಜಾಹೀರಾತು ಶುಲ್ಕ 90 ಲಕ್ಷ ರೂ., ಕಟ್ಟಡ ಪರವಾನಿಗೆ ಶುಲ್ಕ 40 ಲಕ್ಷ ರೂ., ನೀರು ಸರಬರಾಜು ಶುಲ್ಕ 9 ಕೋಟಿ ರೂ., ಒಳಚರಂಡಿ ಜೋಡಣೆಯಿಂದ 16 ಲಕ್ಷ ರೂ., ವಾಣಿಜ್ಯ ಸಂಕೀರ್ಣದಿಂದ 1.50 ಕೋಟಿ ರೂ. ಆದಾಯವನ್ನು ಅಂದಾಜಿಸಲಾಗಿದೆ.

ವೆಚ್ಚಗಳ ಅಂದಾಜು: ಆಡಳಿತಾತ್ಮಕ ವೆಚ್ಚಗಳು ಒಟ್ಟು 8.93 ಕೋಟಿ ರೂ., ಲೋಕೋಪಯೋಗಿ ಕಾಮಗಾರಿಗಳು 27.80 ಕೋಟಿ ರೂ., ದಾರಿದೀಪಗಳ ವೆಚ್ಚ 2.68 ಕೋಟಿ ರೂ., ನೀರು ಸರಬರಾಜು 3.70 ಕೋಟಿ ರೂ., ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆ 10.25 ಕೋಟಿ ರೂ., ಒಳಚರಂಡಿ ಯೋಜನೆಗಳು 2.50 ಕೋಟಿ ರೂ., ಉದ್ಯಾನವನಗಳು 1.55 ಕೋಟಿ ರೂ., ಬಡಜನರ ಕಲ್ಯಾಣ ನಿಧಿ 55 ಲಕ್ಷ ರೂ., ವಿಕಲಚೇತನರ ಕಲ್ಯಾಣ ನಿಧಿ 22 ಲಕ್ಷ ರೂ., ನಲ್ಮ್ ಯೋಜನೆಗೆ 20 ಲಕ್ಷ ರೂ. ಕಾದಿರಿಸಲಾಗಿದೆ.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ನಗರಸಭೆ ನಿಧಿಯಿಂದ 60 ಲಕ್ಷ ರೂ., ಎಸ್‌ಎಫ್‌ಸಿ ಮುಕ್ತನಿಧಿಯಿಂದ 1.40 ಕೋಟಿ ರೂ., ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದಿಂದ 1.66 ಕೋಟಿ ರೂ. ನಿಗದಿಪಡಿಸ ಲಾಗಿದೆ.

15ಕೋ.ರೂ. ವೆಚ್ಚದಲ್ಲಿ ಹೊಸ ಕಟ್ಟಡ

ನಗರದ ಹಳೆಯ ತಾಲೂಕು ಕಚೇರಿ ಇರುವ 1.29 ಎಕರೆ ಜಾಗದಲ್ಲಿ ನಗರಸಭಾ ಕಚೇರಿ ಜಿ ಪ್ಲಸ್ 3 ನೂತನ ಕಟ್ಟಡವನ್ನು ನಿರ್ಮಿಸಲು 15 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿದೆ. ಈಗಿರುವ ಕಟ್ಟಡವನ್ನು ವಾಣಿಜ್ಯ ಸಂಕೀರ್ಣಕ್ಕಾಗಿ ಬಳಸಲು ಉದ್ದೇಶಿಲಾಗಿದೆ. ಸಿಬ್ಬಂದಿಯ ಅನುಕೂಲಕ್ಕಾಗಿ ಮಣಿಪಾಲದಲ್ಲಿ ವಸತಿಗೃಹ ನಿರ್ಮಾಣಕ್ಕೆ ನಿವೇಶನ ಲಭ್ಯವಿದ್ದು, 1.25 ಕೋಟಿ ರೂ. ಅಂದಾಜುಪಟ್ಟಿಯನ್ನು ಆಡಳಿತ ಮಂಜೂರಾತಿಗಾಗಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ನಗರಕ್ಕೆ ವಾರಾಹಿ ನದಿಯಿಂದ ನೀರು
ಉಡುಪಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಪೂರೈಕೆಗಾಗಿ ವಾರಾಹಿ ನದಿ ಮೂಲದಿಂದ ಪ್ರತೀದಿನ 42 ಎಂಎಲ್‌ಡಿ ನೀರನ್ನು ಪೈಪ್‌ಲೈನ್ ಮೂಲಕ ಬಜೆ ಅಣೆಕಟ್ಟಿಗೆ ಹರಿಸಿ ಹೆಚ್ಚುವರಿಯಾಗಿ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗುವುದು. ಅವಶ್ಯ ಇರುವ ಕಡೆ ಆರು ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಿ ಶಾಶ್ವತವಾಗಿ ದಿನದ 24ಗಂಟೆಗಳ ಕುಡಿಯುವ ನೀರು ನೀಡುವ 270ಕೋಟಿ ರೂ. ವೆಚ್ಚದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹೇಳಿದರು.

ಅಭಿವೃದ್ಧಿ ಯೋಜನೆಗಳು: ಅನುಮತಿ ಇಲ್ಲದೆ ಹಾಕುವ ಬ್ಯಾನರ್‌ಗಳನ್ನು ತಡೆಗಟ್ಟು ನಿಗದಿತ ಸಂಖ್ಯೆಯ ಮಿತಿಯಲ್ಲಿ ಅನುಮತಿ ನೀಡಲು ಕ್ರಮ ಮತ್ತು ಪ್ಲಾಸ್ಟಿಕ್ ಬದಲು ಬಟ್ಟೆಗಳಿಂದ ತಯಾರಿಸಿದ ಬ್ಯಾನರ್‌ಗಳನ್ನು ಮಾತ್ರ ಬಳಸಲು ಅನುಮತಿ ನೀಡಲಾಗುವುದು. ಬೃಹತ್ ಗಾತ್ರದ ಬ್ಯಾನರ್‌ಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗುವುದು.

ಸಂತೆಕಟ್ಟೆ, ಮಣಿಪಾಲ ಹಾಗೂ ಉಡುಪಿ ನಗರ ಪ್ರದೇಶದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು 1.25 ಕೋಟಿ ರೂ. ಮೀಸಲಿರಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸೆ ಎಸೆಯುವವರ ಬಗ್ಗೆ ನಿಗಾ ವಹಿಸಲು ಆಯ್ದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ದಂಡ ವಿಧಿಸಲು ನಿರ್ಧರಿಸಲಾಗಿದೆ. ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ 13.16 ಕೋಟಿ ರೂ. ವೆಚ್ಚದ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗಿದೆ. ನಗರಸಭೆ ಕಚೇರಿಯಲ್ಲಿ ನಗದುರಹಿತ ಸ್ವೀಕೃತಿ ವ್ಯವಸ್ಥೆಯನ್ನು ಖಜಾನೆ- 2 ತಂತ್ರಾಂಶ ಬಳಸಿ ಅಳವಡಿಸುವ ಬಗ್ಗೆ ಉದ್ದೇಶಿಲಾಗಿದೆ.

‘ಇದೊಂದು ಜನಪರ ಬಜೆಟ್’ ಎಂಬುದಾಗಿ ಆಡಳಿತ ಪಕ್ಷದ ಸದಸ್ಯೆ ಸೆಲಿನಾ ಕರ್ಕಡ ಬಣ್ಣಿಸಿದರು. ವಿಪಕ್ಷ ನಾಯಕ ಡಾ.ಎಂ.ಆರ್. ಪೈ, ಮಾತನಾಡಿ, ನಗರಸಭೆಯನ್ನು ಪೇಪರ್ ಲೆಸ್ ಹಾಗೂ ಸೋಡಿಯಂ ಮುಕ್ತ ದಾರಿದೀಪ ಘೋಷಣೆಯು ಉತ್ತಮ ಹೆಜ್ಜೆಯಾಗಿದೆ. ಉಳಿದಂತೆ ಈ ಬಜೆಟ್ ನಲ್ಲಿ ಹೊಸತೇನು ಇಲ್ಲ. ನಗರಸಭೆಯ ಎಲ್ಲ 35 ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಕ್ರಮ ನಡೆಸಲಾಗಿದೆ ಎಂಬುದು ಸುಳ್ಳು ಎಂದು ಟೀಕಿಸಿದರು.

ಬಳಿಕ ಬಜೆಟ್ ಕುರಿತ ಚರ್ಚೆಗಳು ನಡೆದು, ವಾರಾಹಿ ನದಿಯಿಂದ ನಗರಕ್ಕೆ ನೀರು ತರುವ ಯೋಜನೆ ಕಷ್ಟ ಸಾಧ್ಯ ಎಂಬ ಅಭಿಪ್ರಾಯಗಳನ್ನು ವಿಪಕ್ಷ ಸದಸ್ಯರು ವ್ಯಕ್ತಪಡಿಸಿದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್ ರಾಜ್, ಪೌರಾಯುಕ್ತ ಡಿ.ಮಂಜುನಾಥಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News