ತ್ರಿವಳಿ ತಲಾಕ್‌ ಮಸೂದೆ ‘ಪೈಶಾಚಿಕ’ ಮತ್ತು ಅಸ್ಪಷ್ಟ: ಮಹಿಳಾ ಕಾರ್ಯಕರ್ತರು

Update: 2018-01-29 15:29 GMT

ಹೊಸದಿಲ್ಲಿ, ಜ.29: ಕೇಂದ್ರದ ತ್ರಿವಳಿ ತಲಾಕ್ ಮಸೂದೆಯು ಪೈಶಾಚಿಕ ಮತ್ತು ಅಸ್ಪಷ್ಟವಾಗಿರುವ ಕಾರಣ ಅದನ್ನು ನಾವು ತಿರಸ್ಕರಿಸುತ್ತೇವೆ ಎಂದು ಮಹಿಳಾ ಕಾರ್ಯಕರ್ತರ ಗುಂಪೊಂದು ತಿಳಿಸಿದೆ.

ಮುಂದಿನ ಸಂಸತ್ ಬಜೆಟ್ ಅಧಿವೇಶನದಲ್ಲಿ ತ್ರಿವಳಿ ತಲಾಕ್ ಮಸೂದೆಗೆ ಅಂಗೀಕಾರ ಪಡೆಯಲು ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಮತ್ತು ಪ್ರಧಾನಿ ಮೋದಿ ಉತ್ಸುಕರಾಗಿದ್ದಾರೆ. ಆದರೆ ಹೈದರಾಬಾದ್ ಮೂಲದ ಮುಸ್ಲಿಂ ಮಹಿಳಾ ಸಂಶೋಧನಾ ಕೇಂದ್ರದ ಸಂಚಾಲಕಿ ಅಸ್ಮಾ ಝೆಹ್ರಾ ಅವರು ಈ ಮಸೂದೆಯು ಮಹಿಳೆಯರ ಮತ್ತು ಮಕ್ಕಳ ಹಿತಾಸಕ್ತಿಯ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.

ಈ ಮಸೂದೆಯಲ್ಲಿ ನಾಗರಿಕ ವಿಷಯವನ್ನು ಅಪರಾಧಿ ಕೃತ್ಯವಾಗಿ ಪರಿವರ್ತಿಸಲಾಗಿದೆ ಮತ್ತು ಗಂಡನನ್ನು ಮೂರು ವರ್ಷ ಜೈಲಿಗೆ ಕಳುಹಿಸಲಾಗುತ್ತದೆ. ಇದರಲ್ಲಿ ಪರಿಹಾರದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹಾಗಾಗಿ ಈ ಮಸೂದೆ ಮಹಿಳಾ ಮತ್ತು ಮಕ್ಕಳ ವಿರೋಧಿಯಾಗಿದೆ ಜೊತೆಗೆ ಸಮಾಜ ವಿರೋಧಿಯೂ ಆಗಿದೆ ಎಂದು ಅಸ್ಮಾ ತಿಳಿಸಿದ್ದಾರೆ.

ತಕ್ಷಣ ನೀಡುವ ಅನ್ನು ಅಪರಾಧೀಕರಣಗೊಳಿಸುವ ವಿವಾಹಿತ ಮಹಿಳೆಯರ ಹಕ್ಕುಗಳ ರಕ್ಷಣಾ ಕಾಯ್ದೆಯನ್ನು ಇತ್ತೀಚೆಗೆ ನಡೆದ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. ಆದರೆ ಈ ಮಸೂದೆಗೆ ಇನ್ನು ಕೂಡಾ ರಾಜ್ಯಸಭೆಯಲ್ಲಿ ಬಾಕಿಯುಳಿದಿದೆ.

ಈ ಮಸೂದೆಯ ಪ್ರಕಾರ, ತಕ್ಷಣ ನೀಡುವ ತಲಾಕ್‌ಗೆ ಮೂರು ವರ್ಷ ಜಾಮೀನುರಹಿತ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವ ಪ್ರಸ್ತಾಪ ಮಾಡಲಾಗಿದೆ.

ತ್ರಿವಳಿ ತಲಾಕ್ ಮಸೂದೆಯಲ್ಲಿ ಉಲ್ಲೇಖಿಸಲಾಗಿರುವ ಶಬ್ಧಗಳು ತಲಾಕ್ ಮತ್ತು ತ್ರಿವಳಿ ತಲಾಖ್ ಪ್ರಕರಣಗಳನ್ನು ನಿಭಾಯಿಸುವ ವೇಳೆ ಗೊಂದಲವನ್ನು ಸೃಷ್ಟಿಸಲಿದೆ ಎಂದು ಅಸ್ಮಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News