×
Ad

ನಾಗರಿಕರ ಹತ್ಯೆ: ಸೈನಿಕರನ್ನು ಬಂಧಿಸುವಂತೆ ನ್ಯಾಶನಲ್ ಕಾನ್ಫರೆನ್ಸ್ ಆಗ್ರಹ

Update: 2018-01-29 21:09 IST

ಶ್ರೀನಗರ, ಜ.29: ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ನಾಗರಿಕರನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಭಾರತೀಯ ಸೇನೆಯ ಯೋಧರನ್ನು ಬಂಧಿಸುವಂತೆ ನ್ಯಾಶನಲ್ ಕಾನ್ಫರೆನ್ಸ್ ಪಕ್ಷ ಸೋಮವಾರ ಆಗ್ರಹಿಸಿದ್ದರೆ ಬಿಜೆಪಿ ಸೈನಿಕರ ವಿರುದ್ಧದ ಎಫ್‌ಐಆರ್‌ಅನ್ನು ಹಿಂಪಡೆಯುವಂತೆ ಸೂಚಿಸಿದೆ.

ಇದರಲ್ಲಿ ರಾಜಕೀಯ ಬೇಡ. ಹತ್ಯೆಗಳ ಸರಣಿಯು ಕೊನೆಯಾಗಬೇಕಿದೆ. ಈ ರಕ್ತಪಾತಕ್ಕೆ ನಾವು ಕೊನೆಹಾಡಲೇಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥರಾದ ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ ಘಟನೆಗೆ ಸಂಬಂಧಿಸಿದಂತೆ ಒಬ್ಬರು ಮೇಜರ್ ಸೇರಿದಂತೆ ಇತರ ಯೋಧರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಯಲ್ಲಿ ಗುಂಡುಗಳನ್ನು ಎದೆಯ ಎತ್ತರದಲ್ಲಿ ಹಾರಿಸಲಾಗಿದೆ. ಅದರರ್ಥ, ಪಡೆಗಳು ಪರಿಸ್ಥಿತಿಯನ್ನು ನಿಭಾಯಿಸುತ್ತಿರಲಿಲ್ಲ, ಬದಲಾಗಿ ಕೇವಲ ಗುಂಡು ಹಾರಿಸುತ್ತಿದ್ದರು. ಪೊಲೀಸರು ಈಗಾಗಲೇ ಎಫ್‌ಐಆರ್ ದಾಖಲಿಸಿರುವಾಗ ನ್ಯಾಯಾಂಗ ತನಿಖೆಗೆ ಆದೇಶ ನೀಡುವ ಉದ್ದೇಶವಾದರೂ ಏನು ಎಂದು ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ ಸೈನಿಕರನ್ನು ಬಂಧಿಸಬೇಕು ಎಂದು ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಅಲಿ ಮುಹಮ್ಮದ್ ಸಾಗರ್ ಆಗ್ರಹಿಸಿದ್ದಾರೆ. ಮತ್ತೊಂದೆಡೆ, ಬಿಜೆಪಿ ಶಾಸಕ ಆರ್.ಎಸ್ ಪತನಿಯಾ, ಸೈನಿಕರ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ಅನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಘಟನೆಯ ಬಗ್ಗೆ ಹೊಸ ಎಫ್‌ಐಆರ್ ದಾಖಲಿಸಬೇಕು. ಅದರಲ್ಲಿ ಸೈನಿಕರ ಹೆಸರುಗಳನ್ನು ಉಲ್ಲೇಖಿಸಬಾರದು ಎಂದು ಪತನಿಯಾ ತಿಳಿಸಿದ್ದಾರೆ.

ಕಲ್ಲು ತೂರಾಟ ನಡೆಸುತ್ತಿದ್ದ ಗುಂಪನ್ನು ತಡೆಯಲು ನಿಯೋಜಿಸಲಾಗಿದ್ದ ಸೇನಾ ತುಕಡಿಯ ಮೇಲೆಯೇ ಗುಂಪು ದಾಳಿ ನಡೆಸಿದ ಪರಿಣಾಮ ಸೇನೆಯು ನಾಗರಿಕರ ಮೇಲೆ ಗುಂಡು ಹಾರಿಸಿತ್ತು. ಈ ಘಟನೆಯಲ್ಲಿ ಜಾವೀದ್ ಅಹ್ಮದ್ ಮತ್ತು ಸುಹೈಲ್ ಅಹ್ಮದ್ ಎಂಬ ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News