×
Ad

ಚೇತರಿಸಿಕೊಳ್ಳುತ್ತಿದೆ ಭಾರತೀಯ ಆರ್ಥಿಕತೆ: 2018-19ರಲ್ಲಿ 7.5% ತಲುಪುವ ನಿರೀಕ್ಷೆ

Update: 2018-01-29 21:56 IST

ಹೊಸದಿಲ್ಲಿ, ಜ.29: ಜಿಎಸ್‌ಟಿ ಮತ್ತು ನೋಟು ಅಮಾನ್ಯದಿಂದ ಉಂಟಾದ ಹಿನ್ನಡೆಯಿಂದ ಭಾರತೀಯ ಆರ್ಥಿಕತೆಯು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ ಮತ್ತು 2018-19ರ ವೇಳೆಗೆ 7-7.5% ತಲುಪಲಿದೆ. ಹಾಗಾಗಿ ಭಾರತವು ಮತ್ತೊಮ್ಮೆ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಸೋಮವಾರ ಬಿಡುಗಡೆ ಮಾಡಲಾದ ಆರ್ಥಿಕ ಸಮೀಕ್ಷೆಯು ತಿಳಿಸಿದೆ. ಆದರೆ ಈ ಬೆಳವಣಿಗೆಯು ಏರುತ್ತಿರುವ ತೈಲ ಬೆಲೆ ಹಾಗೂ ಶೇರು ಪೇಟೆಯಲ್ಲಿ ಉಂಟಾಗುವ ವ್ಯತ್ಯಯದಿಂದ ಸವಾಲುಗಳನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರರು ತಯಾರಿಸಿರುವ ಆರ್ಥಿಕತೆಯ ಸ್ಥಿತಿ ಬಗೆಗಿನ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಕೇಂದ್ರದ ಬಿಜೆಪಿ ಸರಕಾರವು ತನ್ನ ಐದನೇ ಮತ್ತು ಅಂತಿಮ ಬಜೆಟ್‌ಅನ್ನು ಮಂಡಿಸುವ ಕೇವಲ ಎರಡು ದಿನಗಳ ಮೊದಲು ಈ ಸಮೀಕ್ಷೆಯನ್ನು ಬಿಡುಗಡೆ ಮಾಡಲಾಗಿದೆ. ಆರ್ಥಿಕ ಸಮೀಕ್ಷೆ 2017-18ಅನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಸಂಸತ್‌ನಲ್ಲಿ ಮಂಡಿಸಿದರು.

ಪ್ರಸಕ್ತ ವಿತ್ತೀಯ ವರ್ಷದಲ್ಲಿ ದೇಶದ ಜಿಡಿಪಿಯು 6.75% ಇದೆ ಎಂದು ತಿಳಿಸಿರುವ ಸಮೀಕ್ಷೆ ಮುಂದಿನ ವರ್ಷ ರಫ್ತು ಮತ್ತು ಖಾಸಗಿ ಹೂಡಿಕೆಯೂ ಚೇತರಿಕೆ ಕಾಣಲಿದೆ ಎಂಬ ಸೂಚನೆ ನೀಡಿದೆ. 2016-17ರ ಸಾಲಿನಲ್ಲಿ 7.1 ಶೇ. ಇದ್ದ ಜಿಡಿಪಿ, ಅದರ ಹಿಂದಿನ ವರ್ಷ ಶೇ. 8ರಷ್ಟಿತ್ತು. 2014-15ರಲ್ಲಿ ಜಿಡಿಪಿ ದರ ಶೇ. 7.5 ಆಗಿತ್ತು.

ಪ್ರಸಕ್ತ ವರ್ಷದಲ್ಲಿ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಜಾರಿ ಮತ್ತು 2016ರ ನವೆಂಬರ್‌ನಲ್ಲಿ ನೋಟು ರದ್ದತಿಯ ಪರಿಣಾಮದಿಂದಾಗಿ ಜಿಡಿಪಿ ದರದಲ್ಲಿ ಇಳಿಕೆಯಾಗಿತ್ತು. ರಫ್ತು ದರದಲ್ಲಿ ಏರಿಕೆ ಕಂಡರೆ ಆರ್ಥಿಕ ಬೆಳವಣಿಗೆಯು ಶೇ. 7.5ಕ್ಕಿಂತಲೂ ಹೆಚ್ಚಿನ ದರದಲ್ಲಿ ನಡೆಯಲಿದೆ. ಆದರೆ ತೈಲಬೆಲೆ ಏರಿಕೆ ಮತ್ತು ಶೇರು ಪೇಟೆಯಲ್ಲಿ ಉಂಟಾಗುವ ತಲ್ಲಣವು ಈ ಏರಿಕೆಗೆ ಕಡಿವಾಣ ಹಾಕುವ ಭಯವಿದೆ ಎಂದು ಸಿಇಎ ಅರವಿಂದ ಸುಬ್ರಮಣ್ಯನ್ ತಿಳಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಭಾರತವು ಆಮದು ಮಾಡಿಕೊಳ್ಳುವ ಕಚ್ಚಾತೈಲದ ಬೆಲೆಯಲ್ಲಿ ಶೇ. 14ರಷ್ಟು ಏರಿಕೆಯಾಗಿದ್ದು, ಈ ದರವು 2018-19ರ ಸಾಲಿನಲ್ಲಿ ಮತ್ತೆ 10-15 ಶೇ. ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸುತ್ತದೆ.

ಖಾಸಗಿ ಹೂಡಿಕೆ ಮತ್ತು ರಫ್ತಿನ ಮೂಲಕ ಭಾರತವು ಆರ್ಥಿಕತೆಯ ಶೀಘ್ರ ಬೆಳವಣಿಗೆಗೆ ವಾತಾವರಣವನ್ನು ಸೃಷ್ಟಿಸಬೇಕು. ಭಾರತದಲ್ಲಿ ವ್ಯವಹಾರ ನಡೆಸುವುದು ಸುಲಭವಾಗಲು ನ್ಯಾಯ ದಾನದಲ್ಲಿ ಉಂಟಾಗುತ್ತಿರುವ ವಿಳಂಬ ಹಾಗೂ ಹಿನ್ನಡೆಯನ್ನು ಸರಿಪಡಿಸುವ ಬಗ್ಗೆ ಚಿಂತಿಸಬೇಕು ಎಂದು ಸಮೀಕ್ಷೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News