ಖುಲಾಸೆಯಾದ ಪೊಲೀಸರ, ಆರೋಪಗಳ ಪಟ್ಟಿ ನೀಡಲು ನ್ಯಾಯಾಲಯ ಆದೇಶ

Update: 2018-01-29 16:31 GMT

ಮುಂಬೈ, ಜ.29: ಸೊಹ್ರಾಬುದ್ದೀನ್ ಶೇಕ್ ಎನ್‌ಕೌಂಟರ್‌ಗೆ ಸಂಬಂಧಪಟ್ಟಂತೆ ಖುಲಾಸೆಗೊಂಡಿರುವ ಪೊಲೀಸ್ ಅಧಿಕಾರಿಗಳ ಹೆಸರನ್ನು ಮತ್ತು ದೋಷಾರೋಪ ಪಟ್ಟಿಯಲ್ಲಿ ಅವರ ಮೇಲೆ ಯಾವ ಆರೋಪ ಹೊರಿಸಲಾಗಿದೆ ಎಂಬ ಬಗ್ಗೆ ಸವಿವರವಾದ ಪಟ್ಟಿಯನ್ನು ನೀಡುವಂತೆ ಬಾಂಬೆ ಉಚ್ಚನ್ಯಾಯಾಲಯ ಸಿಬಿಐ ಅಧಿಕಾರಿಗಳಿಗೆ ಸೂಚಿಸಿದೆ.

ಪ್ರಕರಣದಲ್ಲಿ ಕೆಲವೊಂದು ಪೊಲೀಸ್ ಅಧಿಕಾರಿಗಳನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸೊಹ್ರಾಬುದ್ದೀನ್ ಅವರ ಸಹೋದರ ರುಬಾಬುದ್ದೀನ್ ಶೇಕ್ ಮತ್ತು ಕೇಂದ್ರ ತನಿಖಾ ಮಂಡಳಿ ಸಲ್ಲಿಸಿರುವ ಮೇಲ್ಮನವಿಗಳನ್ನು ನ್ಯಾಯಾಲಯವು ದೈನಂದಿನ ಆಧಾರದಲ್ಲಿ ವಿಚಾರಣೆ ನಡೆಸುವುದು ಎಂದು ನ್ಯಾಯಾಧೀಶೆ ರೇವತಿ ಮೋಹಿತೆ-ಡೆರೆ ತಿಳಿಸಿದ್ದಾರೆ.

ಪ್ರಕರಣದಲ್ಲಿ ಖುಲಾಸೆಗೊಂಡಿರುವ ಬಗ್ಗೆ ಮೇಲ್ಮನವಿ ಸಲ್ಲಿಸಲಾಗಿರುವ ಆರೋಪಿಗಳ ಹೆಸರುಗಳು ಮತ್ತು ಅವರ ವಿರುದ್ಧ ಸಿಬಿಐ ಮಾಡಿರುವ ಆರೋಪ ಮತ್ತು ನಿರ್ಬಂಧಗಳ ಕುರಿತು ಪಟ್ಟಿಯನ್ನು ನೀಡಿ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಈ ಮೇಲ್ಮನವಿಯ ವಿಚಾರಣೆಯು ಫೆಬ್ರವರಿ 9ರಿಂದ ಆರಂಭವಾಗಲಿದೆ.

ಪ್ರಕರಣದಿಂದ ಐಪಿಎಸ್ ಅಧಿಕಾರಿ (ನಿವೃತ್ತ) ಡಿ.ಜಿ ವಂಝಾರ, ರಾಜಕುಮಾರ್ ಪಾಂಡಿಯನ್ ಮತ್ತು ದಿನೇಶ್ ಎಂ.ಎನ್ ಅವರನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯವು 2016ರ ಆಗಸ್ಟ್‌ನಿಂದ 2017ರ ಆಗಸ್ಟ್ ನಡುವಿನ ಅವಧಿಯಲ್ಲಿ ನೀಡಿರುವ ಆದೇಶವನ್ನು ಪ್ರಶ್ನಿಸಿ ರುಬಾಬುದ್ದೀನ್ ಪರಿಷ್ಕೃತ ಮೇಲ್ಮನವಿಯನ್ನು ಸಲ್ಲಿಸಿದ್ದರು.

ಸಿಬಿಐ ಆರೋಪಿಗಳೆಂದು ಹೆಸರಿಸಿದ್ದ 38 ಜನರ ಪೈಕಿ ವಿಚಾರಣಾ ನ್ಯಾಯಾಲಯವು 15 ಮಂದಿಯನ್ನು ಖುಲಾಸೆಗೊಳಿಸಿತ್ತು. ಈ ಪಟ್ಟಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಐಪಿಎಸ್ ಅಧಿಕಾರಿ ಎನ್.ಕೆ ಅಮೀನ್ ಹಾಗೂ ಗುಜರಾತ್‌ನ ಹಲವು ಪೊಲೀಸ್ ಅಧಿಕಾರಿಗಳ ಹೆಸರುಗಳೂ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News