ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ನೆಪದಲ್ಲಿ ಕಿರುಕುಳ: ಆರೋಪ

Update: 2018-01-30 07:09 GMT

ನಿರ್ದಿಷ್ಟ ಪ್ರಯಾಣಿಕರನ್ನು ಗುರಿಯಾಗಿಸಿ ವಿಚಾರಣೆ!

ಅನಿವಾಸಿ ಭಾರತೀಯರ ಅಸಮಾಧಾನ

ಮಂಗಳೂರು, ಜ.29: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಯ ಹೆಸರಿನಲ್ಲಿ ನಿರ್ದಿಷ್ಟ ಪ್ರಯಾಣಿಕರಿಗೆ ಹಾಗೂ ಅನಿವಾಸಿ ಭಾರತೀಯರಿಗೆ ಹಿಂಸೆ ನೀಡಲಾಗುತ್ತಿದೆ ಎಂಬ ದೂರು ಮತ್ತೆ ಕೇಳಿ ಬಂದಿದೆ.

ತಪಾಸಣೆಗಾಗಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಲ್ಲಿಸುವ ಜತೆಗೆ ತಪಾಸಣೆಯ ವೇಳೆ ಕಸ್ಟಮ್ಸ್ ಅಧಿಕಾರಿಗಳು ಅನಗತ್ಯ ಪ್ರಶ್ನೆಗಳ ಮೂಲಕ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗಿವೆ.

ಯುಎಇಯ ಕಂಪೆನಿಯೊಂದರಲ್ಲಿ 10 ವರ್ಷಗಳಿಂದ ಉನ್ನತ ಹುದ್ದೆಯಲ್ಲಿರುವ ಅನಿವಾಸಿ ಭಾರತೀಯ ಫತಾವುಲ್ಲಾ ಸಾಹೇಬ್ ಎಂಬವರು ತಿಂಗಳಿಗೊಮ್ಮೆ ತಮ್ಮ ಕುಟುಂಬವನ್ನು ಭೇಟಿಯಾಗಲು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಮಂಗಳೂರಿಗೆ ಆಗಮಿಸುತ್ತಿರುತ್ತಾರೆ. ಜ.25ರಂದು ಮಂಗಳೂರಿಗೆ ಆಗಮಿಸಿದ ವೇಳೆ ನನಗೆ ಕಸ್ಟಮ್ ಅಧಿಕಾರಿಗಳು ವಿಚಾರಣೆ ನೆಪದಲ್ಲಿ ಅನಗತ್ಯ ತೊಂದರೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

‘‘ಅಂದು ಕೂಡಾ ನಾನು ಒಂದು ಕೈ ಚೀಲ ಹಾಗೂ ನೋಟ್‌ಬುಕ್‌ನೊಂದಿಗೆ ಪ್ರಯಾಣಿಸಿದ್ದೆ. ವಿಮಾನದಿಂದ ಇಳಿದು ತಪಾಸಣೆಯ ವೇಳೆ ಬ್ಯಾಗ್ ಹಾಗೂ ನೋಟ್‌ಬುಕ್ ಸ್ಕ್ಯಾನಿಂಗ್ ಯಂತ್ರದಲ್ಲಿಡಲಾಯಿತು. ಅವು ಸ್ಕ್ಯಾನ್ ಕೂಡಾ ಆಗಿತ್ತು. ನಾನು ನನ್ನ ಬ್ಯಾಗ್ ಎತ್ತಿಕೊಂಡು ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಅಲ್ಲಿದ ಕಸ್ಟಮ್ಸ್ ಅಧಿಕಾರಿ ಕೃಷ್ಣಪ್ರಸಾದ್ ರಾವ್ ಎಂಬವರು ನನ್ನ ಪಾಸ್‌ಪೋರ್ಟ್ ನೀಡುವಂತೆ ಕೇಳಿದರು. ನಾನು ಕೊಟ್ಟೆ. ಯುಎಇಯಲ್ಲಿ ನೀವೇನು ಮಾಡುತ್ತಿದ್ದೀರಿ? ಆಗಾಗ ನೀವು ಮಂಗಳೂರಿಗೆ ಬರುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು. ಅವರು ಆ ಪ್ರಶ್ನೆ ಯಾಕೆ ಕೇಳಿದರೆಂದು ನನಗೆ ಅರ್ಥವಾಗುತ್ತಿಲ್ಲ. ಯಾಕೆಂದರೆ ಅದು ಅವರಿಗೆ ಸಂಬಂಧಪಡದ ವಿಷಯ. ಹಾಗಿದ್ದರೂ ನಾನು ದುಬೈನ ಕಂಪೆನಿಯೊಂದರಲ್ಲಿ ಹಿರಿಯ ನಿರ್ವಹಣಾ ಹುದ್ದೆಯಲ್ಲಿರುವುದಲ್ಲದೆ ಅಲ್ಲಿ ವ್ಯವಹಾರವನ್ನು ಹೊಂದಿರುವುದಾಗಿ ತಿಳಿಸಿದೆ. ಇದನ್ನು ಕೇಳಿದೊಡನೆ ಅವರು ನನ್ನ ಶೂಗಳನ್ನು ಕಳಚಿ ಅದಾಗಲೇ ಸ್ಕ್ಯಾನ್ ಆದ ನನ್ನ ಬ್ಯಾಗ್‌ನೊಂದಿಗೆ ಮತ್ತೆ ಸ್ಕ್ಯಾನಿಂಗ್ ಯಂತ್ರದಲ್ಲಿಡುವಂತೆ ಹೇಳಿದರು. ಶೂಗಳನ್ನು ಯಾಕೆ ಸ್ಕ್ಯಾನ್ ಮಾಡಬೇಕು. ಅದೂ ಒಮ್ಮೆ ಸ್ಕ್ಯಾನ್ ಆದ ಬ್ಯಾಗ್‌ಜತೆ ಎಂದು ನಾನು ಅವರನ್ನು ಪ್ರಶ್ನಿಸಿದೆ. ನಾನು ಪ್ರಕ್ರಿಯೆಯನ್ನು ನಿಭಾಯಿಸುತ್ತಿದ್ದೇನೆ ಎಂಬುದು ಅವರ ಉತ್ತರವಾಗಿತ್ತು. ಪ್ರಕ್ರಿಯೆ ಆಗಿದ್ದಲ್ಲಿ ಆರಂಭದಲ್ಲೇ ಬ್ಯಾಗ್ ಜತೆ ಶೂಗಳನ್ನು ಸ್ಕ್ಯಾನ್ ಮಾಡಬಹುದಿತ್ತಲ್ಲಾ ಎಂದು ಅವರನ್ನು ಪ್ರಶ್ನಿಸಿದೆ. ಅದಕ್ಕೆ ಅವರು ಪ್ರತಿಕ್ರಿಯಿಸಲಿಲ್ಲ. ಈ ಮೂಲಕ ಉತ್ತಮ ಹೆಸರನ್ನು ಹೊಂದಿರುವ ನನಗೆ ಆ ಅಧಿಕಾರಿ ಪ್ರಕ್ರಿಯೆ (ಪ್ರೊಸೀಜರ್) ಹೆಸರಿನಲ್ಲಿ ಅವಮಾನ ಮಾಡಿದ್ದಾರೆ’’ ಎಂದು ಫತಾವುಲ್ಲಾ ಆರೋಪಿಸಿದ್ದಾರೆ.

‘‘ಕಾನೂನು ಪಾಲಿಸುವ ನಮ್ಮಂತಹವರಲ್ಲಿ ಅಪರಾಧ ಕೃತ್ಯ ಎಸಗಿದವರಂತೆ ವರ್ತಿಸುವುದೇಕೆ ಎಂದು ನಾನು ಆ ಅಧಿಕಾರಿಯನ್ನು ಪ್ರಶ್ನಿಸಿದ್ದೇನೆ. ನಮ್ಮಂತಹ ಉತ್ತಮ ಹುದ್ದೆಯಲ್ಲಿರುವವರೊಂದಿಗೆ ಈ ರೀತಿ ವರ್ತಿಸಿದರೆ ಜನಸಾಮಾನ್ಯರೊಂದಿಗೆ ಕಸ್ಟಮ್ಸ್ ಅಧಿಕಾರಿಗಳು ಯಾವ ರೀತಿ ವರ್ತಿಸಬಹುದು? ಇಂತಹ ಅನುಭವಗಳು ಆದರೂ ಸುಮ್ಮನೆ ವಿವಾದ ಸೃಷ್ಟಿಸುವುದೇಕೆ ಎಂಬ ಭಯದಿಂದ ಹೆಚ್ಚಿನವರು ಅವಮಾನವನ್ನು ಸಹಿಸಿಕೊಂಡು ಸುಮ್ಮನಿದ್ದುಬಿಡುತ್ತಾರೆ. ಈ ಹಿಂದಿನ ನನ್ನ ಪ್ರಯಾಣದ ಸಂದರ್ಭದಲ್ಲಿಯೂ ಇನ್ನೊಬ್ಬ ಕಸ್ಟಮ್ಸ್ ಅಧಿಕಾರಿ ನನ್ನಲ್ಲಿ ಇದೇ ರೀತಿಯ ಪ್ರಶ್ನೆ ಕೇಳಿದ್ದರು ಎಂದು ಫತಾವುಲ್ಲಾ ‘ವಾರ್ತಾ ಭಾರತಿ’ಗೆ ತಿಳಿಸಿದ್ದಾರೆ.

ಎರಡು ಸ್ಕ್ಯಾನರ್‌ಗಳಿದ್ದರೂ ಒಂದು ಮಾತ್ರ ಸಕ್ರಿಯ!

ಹಿಂದೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗುಗಳ ತಪಾಸಣೆಗೆ ಕೇವಲ ಒಂದು ಸ್ಕ್ಯಾನಿಂಗ್ ಯಂತ್ರವಿತ್ತು. ಇದರಿಂದ ಪ್ರಯಾಣಿಕರು ಬಹಳ ಹೊತ್ತು ಸರತಿ ಸಾಲಿನಲ್ಲಿ ಕಾಯಬೇಕಾಗಿತ್ತು. ಈ ಬಗ್ಗೆ ಅನೇಕ ಪ್ರಯಾಣಿಕರ ದೂರಿನ ಮೇರೆಗೆ ಎರಡನೆ ಸ್ಕ್ಯಾನಿಂಗ್ ಯಂತ್ರ ಅಳವಡಿಸಲಾಗಿತ್ತು. ಆದರೆ, ಎರಡು ಯಂತ್ರಗಳಿದ್ದರೂ ಸಕ್ರಿಯವಾಗಿರುವುದು ಒಂದು ಮಾತ್ರ. ಒಂದು ಯಾವಾಗಲೂ ದುರಸ್ತಿಯಲ್ಲಿರುತ್ತದೆ. ನಿತ್ಯ ಬೆಳಗ್ಗೆ ಬರುವ ಎರಡು ವಿಮಾನಗಳ ಪೈಕಿ ಒಂದು ವಿಮಾನ ತಡವಾದರೆ ಎರಡೂ ವಿಮಾನಗಳ ಪ್ರಯಾಣಿಕರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯಬೇಕಾಗುತ್ತದೆ. ಈ ಸರತಿಯನ್ನು ನಿಯಂತ್ರಿಸಲು ಕೂಡಾ ಇಲ್ಲಿ ವ್ಯವಸ್ಥೆ ಇಲ್ಲ. ಕಸ್ಟಮ್ಸ್ ಅಧಿಕಾರಿಗಳು ಮಾತ್ರ ಪ್ರಯಾಣಿಕರ ಜಾತಕ ಜಾಲಾಡುವುದರಲ್ಲಿ ನಿರತರಾಗಿರುತ್ತಾರೆ.

ಎರಡೂ ಸ್ಕ್ಯಾನಿಂಗ್ ಯಂತ್ರಗಳು ಯಾಕೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪ್ರಶ್ನಿಸಿದರೆ, ಯಾವಾಗ ರೀಪೇರಿ ಮಾಡಬೇಕೆಂದು ತೀರ್ಮಾನಿಸಲು ಇಲ್ಲಿ ಅಧಿಕಾರಿಗಳಿದ್ದಾರೆ ಅದು ನಿಮ್ಮ ಕೆಲಸವಲ್ಲ ಎಂದು ಅಹಂ ಪ್ರದರ್ಶಿಸುತ್ತಾರೆ. ರಾವ್ ಎಂಬ ಅಧಿಕಾರಿ ಕೇರಳ ಮೂಲದ ಹಲವು ಪ್ರಯಾಣಿಕರ ಜತೆ ತೀರಾ ಒರಟಾಗಿ ವರ್ತಿಸುತ್ತಾರೆ ಎಂದು ಮೂಡುಬಿದಿರೆಯ ಅಬೂ ಸಾದಿಕ್ ಎಂಬವರು ಆರೋಪಿಸಿದ್ದಾರೆ.

ದುಬೈಯಲ್ಲಿ ನಾವು ಕಷ್ಟಪಟ್ಟು ದುಡಿದು ನಮ್ಮ ದೇಶಕ್ಕೆ ಹಿಂದಿರುಗುವ ವೇಳೆ ಈ ರೀತಿ ಕಸ್ಟಮ್ಸ್ ಅಧಿಕಾರಿಗಳು ವಿನಾ ಕಾರಣ ಅವಮಾನ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ. ನಾವೇನೂ ಮಾಡದೆ ಈ ರೀತಿಯ ಚಿತ್ರಹಿಂಸೆ, ಅವಮಾನ ಯಾಕೆಂದು ಅರ್ಥವಾಗುತ್ತಿಲ್ಲ.

ಫತಾವುಲ್ಲಾ ಸಾಹೇಬ್, ಅನಿವಾಸಿ ಭಾರತೀಯ

ಅಧಿಕಾರಿಗಳಿಗೆ ದೂರು ನೀಡಬಹುದು: ರಾವ್

ಮಂಗಳೂರು ವಿಮಾನ ನಿಲ್ದಾಣದಲ್ಲಿನ ಕಸ್ಟಮ್ಸ್ ಅಧಿಕಾರಿಗಳಿಂದ ತೊಂದರೆಯಾಗುತ್ತಿರುವ ಕುರಿತಂತೆ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ.ರಾವ್ ಅವರನ್ನು ಸಂಪರ್ಕಿಸಿದಾಗ, ‘‘ಪ್ರಯಾಣಕರಿಗೆ ಯಾವುದೇ ರೀತಿಯ ತೊಂದರೆ, ದೂರುಗಳಿದ್ದಲ್ಲಿ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಆನ್‌ಲೈನ್ ಮೂಲಕವೂ ದೂರು ಸಲ್ಲಿಸಬಹುದು’’ ಎಂದು ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.

ಬ್ಯಾಗ್ ಒಮ್ಮೆ ಸ್ಕ್ಯಾನ್ ಆಗಿದ್ದರೂ ಮತ್ತೊಮ್ಮೆ ಸ್ಕ್ಯಾನ್ ಮಾಡಿಸುತ್ತಾರೆ. ಕೇವಲ ಕೆಲವರನ್ನು ಆರಿಸಿ ನಿಮ್ಮ ಶೂಗಳನ್ನು ಕಳಚಿ ಯಂತ್ರದೊಳಗೆ ಹಾಕಿ ಎನ್ನುತ್ತಾರೆ. ಕೆಲವರನ್ನು ಆರಿಸಿ ಸ್ಕ್ಯಾನರ್ ಗೇಟಿನಿಂದ ಎರಡೆರಡು ಬಾರಿ ಹಾದು ಹೋಗಲು ಹೇಳುತ್ತಾರೆ. ಕೆಲವು ಅಧಿಕಾರಿಗಳಂತೂ ಪೂರ್ವಾಗ್ರಹ ಪೀಡಿತರಂತೆ ವರ್ತಿಸುತ್ತಾರೆ. ಮಾತ್ರವಲ್ಲ, ಪದೇ ಪದೇ ಗಲ್ಫ್‌ಗೆ ಯಾಕೆ ಹೋಗುತ್ತೀರಿ ಎಂದು ಪ್ರಶ್ನಿಸುತ್ತಾರೆ. ಭದ್ರತೆ ನಿಯಮಗಳನ್ನು ಎಲ್ಲರ ವಿಷಯದಲ್ಲಿ ಸಮಾನವಾಗಿ ಪಾಲಿಸದೆ ಕೆಲವರನ್ನು ಮಾತ್ರ ಗುರಿಯಾಗಿಸಿ ಚಿತ್ರಹಿಂಸೆ ನೀಡುತ್ತಾರೆ. ಈ ಬಗ್ಗೆ ವಿಚಾರಿಸಿದರೆ ಪ್ರೊಸೀಜರ್ ಎನ್ನುತ್ತಾರೆ.

ಅಬೂ ಸಾದಿಕ್, ಮೂಡುಬಿದಿರೆ ನಿವಾಸಿ

 ಸಿಪಿಗ್ರಾಮ್ಸ್‌ನಲ್ಲಿಯೂ ದೂರು ಸಲ್ಲಿಸಲು ಅವಕಾಶ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತೊಂದರೆ ಆಗಿರುವ ಕುರಿತಂತೆ ನಮಗೆ ಯಾವುದೇ ರೀತಿಯ ದೂರು ಬಂದಿಲ್ಲ. ಅಂತಹ ದೂರುಗಳಿದ್ದಲ್ಲಿ ನೇರವಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದು. ಅಥವಾ ಕೇಂದ್ರೀಕೃತ ದೂರು ನೀಡುವ ವ್ಯವಸ್ಥೆಯಾಗಿರುವ ಸಿಪಿಗ್ರಾಮ್ಸ್ (centralised public grievance redress and monitoring system)ಗೂ ದೂರು ನೀಡಬಹುದು. ಈ ವ್ಯವಸ್ಥೆಯು ಭಾರತ ಸರಕಾರದ ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆಗಳು ಮತ್ತು ಪಿಂಚಣಿಗಳ ಆಡಳಿತ ಸಚಿವಾಲಯ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತದೆ ಎಂದು ಸಹಾಯಕ ಕಸ್ಟಮ್ಸ್ ಅಧಿಕಾರಿ ಎ.ಕೆ.ಚೌಧುರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News