ನನ್ನ ಮಗಳದ್ದು ಆತ್ಮಹತ್ಯೆಯಲ್ಲ, ಕೊಲೆ: ನಮಗೆ ನ್ಯಾಯ ಕೊಡಿಸಿ

Update: 2018-01-30 07:45 GMT

ಮಂಗಳೂರು, ಜ.30: ‘‘ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಜಾಯಮಾನದವಳೇ ಅಲ್ಲ. ಅವಳನ್ನು ಕೊಲೆ ಮಾಡಲಾಗಿದೆ. ನಮಗೆ ಬೇಕಿರುವುದು ಪರಿಹಾರವಲ್ಲ, ಅವಳ ಸಾವಿಗೆ ನ್ಯಾಯ ಕೊಡಿಸಿ’’ ಎಂದು ಇತ್ತೀಚೆಗೆ ಮಂಡ್ಯದ ಕೆ.ಆರ್. ಪೇಟೆಯ ನವೋದಯ ಮಾದರಿ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಝೈಬುನ್ನಿಸಾ (12 ವರ್ಷ) ತಂದೆ ಮುಹಮ್ಮದ್ ಇಬ್ರಾಹೀಂ ಅಳಲು ತೋಡಿಕೊಂಡಿದ್ದಾರೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಇಂದು ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

''ಮಗಳು ಮೂರು ತಿಂಗಳ ಹಿಂದೆಯೂ ಅಲ್ಲಿನ ದೈಹಿಕ ಶಿಕ್ಷಕ ರವಿ ಶಿವಕುಮಾರ್ ಎಂಬವರು ತೊಂದರೆ ನೀಡುತ್ತಿರುವುದಾಗಿ ಹೇಳಿದ್ದಳು. ನಾವು ಈ ಬಗ್ಗೆ ವಾರ್ಡನ್‌ಗೆ ತಿಳಿಸಿದಾಗ ನಾವು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದರು. ಆಕೆ ಸಾವಿಗೀಡಾದ ದಿನದ ಮಧ್ಯಾಹ್ನದ ವೇಳೆಯೂ ನನಗೆ ಕರೆ ಮಾಡಿ, ದೈಹಿಕ ಶಿಕ್ಷಕ ತನ್ನ ತಲೆಯನ್ನು ಗೋಡೆಗೆ ಬಡಿದಿದ್ದು, ನೋವಾಗುತ್ತಿರುವುದಾಗಿ ತಿಳಿಸಿದ್ದಳು. ಸಂಜೆ ಮತ್ತೆ ಕರೆ ಮಾಡಿ ನನ್ನನ್ನು ಬಂದು ಕರೆದುಕೊಂಡು ಹೋಗಿ ಎಂದಾಗ ನಾನು ತಾಯಿಗೆ ಕರೆ ಮಾಡಿ ಹೇಳು ಎಂದಿದ್ದೆ. ಸಂಜೆ ಮತ್ತೆ ತಾಯಿಗೂ ಕರೆ ಮಾಡಿದಾಗ ಆಕೆ ಸ್ಟೇಷನ್‌ಗೆ ದೂರು ನೀಡುವಂತೆ ಹೇಳಿದ್ದಳು. ಇದನ್ನು ಕೇಳಿಸಿಕೊಂಡ ದೈಹಿಕ ಶಿಕ್ಷಕ ಆಕೆಯನ್ನು ಕೊಂದು ನೇತು ಹಾಕಿಸಿದ್ದಾನೆ. ಆತ್ಮಹತ್ಯೆಯ ಕತೆಕಟ್ಟಲಾಗಿದೆ'' ಎಂದು ಅವರು ಆರೋಪಿಸಿದರು.

ಮಾತ್ರವಲ್ಲದೆ ಆಕೆಯ ದೇಹವನ್ನು ಇಳಿಸುವುದನ್ನು ಅಲ್ಲಿ ಮಕ್ಕಳು ನೋಡಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಆ್ಯಂಬುಲೆನ್ಸ್‌ಗೆ ಕರೆ ಮಾಡದೆ ಸ್ಕೂಟರ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿರುವುದು ಯಾಕೆ. ಆ ಸಂದರ್ಭ ಬೇರೆ ಶಿಕ್ಷಕರು ಅಲ್ಲಿಗೆ ಯಾಕೆ ಬಂದಿಲ್ಲ. ಇತರ ಶಿಕ್ಷಕರು ಕೂಡಾ ಆತನಿಗೆ ಬೆಂಬಲ ನೀಡಿದ್ದಾರೆಂಬ ಅನುಮಾನ ನಮಗಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಿ ನಮ್ಮ ಮಗಳ ಸಾವಿಗೆ ನ್ಯಾಯ ದೊರೆಯಬೇಕು. ನಮಗೆ ಪರಿಹಾರ ಬೇಡ ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ವೈಎಸ್‌ನ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ, ಎಸ್ಸೆಸ್ಸೆಫ್‌ನ ಸದಸ್ಯ ರಶೀದ್ ಹಾಜಿ ವಗ್ಗ, ಖುಬೈಬ್ ತಂಙಳ್ ಉಳ್ಳಾಲ ಉಪಸ್ಥಿತರಿದ್ದರು.

ಸಿಐಡಿ ತನಿಖೆಗೆ ಎಸ್ಸೆಸ್ಸೆಫ್ ಒತ್ತಾಯ: ಫೆ.3ರಂದು ಪ್ರತಿಭಟನೆ

ಎಸ್ಸೆಸ್ಸೆಫ್‌ನ ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ ಮಾತನಾಡಿ, ಪ್ರಕರಣದ ಬಗ್ಗೆ ಸಿಐಡಿ ತನಿಖೆ ಆಗಬೇಕು. ಅಲ್ಲದೆ ಸಾವಿಗೆ ಕಾರಣಕರ್ತನೆಂದು ಪೋಷಕರು ಆರೋಪಿಸಿರುವ ಶಿಕ್ಷಕ ಸಹಿತ ಎಲ್ಲಾ ಆರೋಪಿಗಳಿಗೂ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ. ಪರಿಹಾರ ಒದಗಿಸಬೇಕು. ಕುಟುಂಬಕ್ಕೆ ಸರಕಾರದಿಂದ ವಸತಿ ವ್ಯವಸ್ಥೆ ಕಲ್ಪಿಸಬೇಕು. ಈ ಸಂಬಂಧ ಫೆ. 3ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಅಪರಾಹ್ನ 2 ಗಂಟೆಗೆ ಎಸ್ಸೆಸ್ಸೆಫ್‌ನಿಂದ ಪ್ರತಿಭಟನೆಯನ್ನು ಆಯೋಜಿಸಿರುವುದಾಗಿ ಅವರು ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News