ವಾಯು ಮಾಲಿನ್ಯ : ಉತ್ತರ ಪ್ರದೇಶ ದೇಶದಲ್ಲೇ ನಂ.1

Update: 2018-01-30 09:51 GMT
ಸಾಂದರ್ಭಿಕ ಚಿತ್ರ

ಲಕ್ನೋ,ಜ.30 : ಉತ್ತರ ಪ್ರದೇಶ ಭಾರತದಲ್ಲಿಯೇ ಅತ್ಯಂತ ಹೆಚ್ಚು ವಾಯು ಮಾಲಿನ್ಯವಿರುವ ರಾಜ್ಯವೆಂದು ಗ್ರೀನ್ ಪೀಸ್ ಇಂಡಿಯಾ ವರದಿಯೊಂದು ತಿಳಿಸಿದೆ. ದೇಶದಲ್ಲಿ ಅತ್ಯಂತ ಹೆಚ್ಚು ವಾಯು ಮಾಲಿನ್ಯವೆದುರಿಸುತ್ತಿರುವ 30 ನಗರಗಳ ಪೈಕಿ 15 ನಗರಗಳು ಉತ್ತರ ಪ್ರದೇಶದಲ್ಲಿವೆ ಎಂದು ವರದಿ ತಿಳಿಸಿದೆ.

ಏರ್‍ಪೊಕ್ಯಾಲಿಪ್ಸ್ -2 ಎಂಬ ಈ ವರದಿಯು ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ವಾರ್ಷಿಕ ವರದಿ ಮತ್ತು ಅವುಗಳ ವೆಬ್ ತಾಣಗಳಲ್ಲಿರುವ ಮಾಹಿತಿಯ ಆಧಾರದಲ್ಲಿ  ತಯಾರಿಸಲಾಗಿದೆ. ಇದರ ಹೊರತಾಗಿ ಆರ್‍ಟಿಐ ಮೂಲಕವೂ ಹಲವಾರು ಅಗತ್ಯ ಮಾಹಿತಿ ಪಡೆದು ವರದಿ ತಯಾರಿಸಲಾಗಿದೆ.

2016ರಲ್ಲಿ 280 ನಗರಗಳ ವಾಯುವಿನಲ್ಲಿರುವ ಪಿಎಂ 10 ಪ್ರಮಾಣವನ್ನನುಸರಿಸಿ ಈ ವರದಿ ತಯಾರಿಸಲಾಗಿದೆ. ಕೆಲವೊಂದು ವಿಚಾರಗಳಲ್ಲಿ 2015ರ ಅಂಕಿಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ಉತ್ತರ ಪ್ರದೇಶದಲ್ಲಿಯೇ ಅತ್ಯಂತ ಹೆಚ್ಚು ವಾಯು ಮಾಲಿನ್ಯಕ್ಕೊಳಗಾಗಿರುವ ನಗರವಾಗಿದೆ.  ದೇಶದಲ್ಲಿ ರಾಜಧಾನಿ ಹೊಸದಿಲ್ಲಿ ಅತ್ಯಂತ ಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರವಾಗಿದ್ದರೆ,  ವಾರಣಾಸಿ ಆರನೇ  ಸ್ಥಾನದಲ್ಲಿ ಹಾಗೂ ಲಕ್ನೋ 18ನೇ ಸ್ಥಾನದಲ್ಲಿದೆ. ಅತ್ಯಂತ ಹೆಚ್ಚು ವಾಯು ಮಾಲಿನ್ಯ(ಪಿಎಂ 10 ಕಣಗಳು) ಇರುವ ಉತ್ತರ ಪ್ರದೇಶದ ಇತರ ನಗರಗಳೆಂದರೆ ಗಾಝಿಯಾಬಾದ್ (236),  ಹಪುರ್(23), ಬರೇಲಿ(226), ಫಿರೋಝಾಬಾದ್(223), ಕಾನ್ಪುರ್(217), ಲಕ್ನೋ(211), ಆಗ್ರಾ(197), ನೊಯ್ಡಾ(195), ಮೊರಾದಾಬಾದ್(192), ಅಲಹಾಬಾದ್(191) ಮತ್ತು ಗಜ್ರೌಲ(171).

ತನ್ನ ವರದಿಯಲ್ಲಿ ಗ್ರೀನ್ ಪೀಸ್ ಪರಿಗಣಿಸಿದ 280 ನಗರಗಳ ಪೈಕಿ ಯಾವೊಂದು ನಗರವೂ  ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿದ  ಪಿಎಂ10 ಮಿತಿ 20ರೊಳಗಿಲ್ಲ. ವಾರಣಾಸಿಯಲ್ಲಿ ಪಿಎಂ 10  ಪ್ರಮಾಣ 236 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News