ಕಪಿಲ್ ದೇವ್-ಹಾರ್ದಿಕ್ ಪಾಂಡ್ಯ ಹೋಲಿಕೆ: ಮಾಜಿ ನಾಯಕ ಅಝರುದ್ದೀನ್ ಹೇಳಿದ್ದೇನು?

Update: 2018-01-30 15:00 GMT

ಕೋಲ್ಕತಾ, ಜ.30: ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರ ಪ್ರದರ್ಶನವನ್ನು ಮಾಜಿ ನಾಯಕ ಕಪಿಲ್ ದೇವ್ ಅವರಿಗೆ ಹೋಲಿಸುತ್ತಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ “ಭಾರತದಲ್ಲಿ ಇನ್ನೊಬ್ಬ ಕಪಿಲ್ ದೇವ್ ಹುಟ್ಟಿ ಬರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

  ಇತ್ತೀಚೆಗೆ ದಕ್ಷಿಣ ಆಫ್ರಿಕದ ಕೇಪ್‌ಟೌನ್‌ನಲ್ಲಿ ದ.ಆಫ್ರಿಕ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಪ್ರತಿಕೂಲವಾದ ವಾತಾವರಣವಿದ್ದರೂ ಆಕರ್ಷಕ 93 ರನ್ ಗಳಿಸಿದ ಪಾಂಡ್ಯ ಅವರ ಬ್ಯಾಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಝರುದ್ದೀನ್, “ಕಪಿಲ್ ದೇವ್ ಬಳಿಕ ಅವರಂತಹ ಇನ್ನೊಬ್ಬರು ಆಟಗಾರರು ರೂಪುಗೊಂಡಿಲ್ಲ. ಅವರಿಗೆ ಪಾಂಡ್ಯರನ್ನು ಹೋಲಿಕೆ ಮಾಡುವುದು ಸರಿಯಲ್ಲ” ಎಂದರು.

  ಆಗಿನ ಕಾಲದಲ್ಲಿ ಕಪಿಲ್ ದೇವ್‌ಗೆ ಅತಿಯಾದ ಒತ್ತಡವಿತ್ತು. ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಕಠಿಣ ಶ್ರಮ ವಹಿಸುತ್ತಿದ್ದರು. ಅವರಿಗೆ ಇದ್ದಷ್ಟು ಕೆಲಸದ ಹೊರೆ ಯಾರಿಗೂ ಇರಲಿಲ್ಲ. ದಿನನಿತ್ಯ 20ರಿಂದ 25 ಓವರ್ ಬೌಲಿಂಗ್ ನಡೆಸುತ್ತಿದ್ದರು. ಇಷ್ಟು ಓವರ್‌ಗಳ ಬೌಲಿಂಗ್‌ನ್ನು ಈಗಿನ ಬೌಲರ್‌ಗಳು ನಡೆಸುವುದಿಲ್ಲ.’’ ಎಂದು 54ರ ಹರೆಯದ ಅಝರುದ್ದೀನ್ ಶಾಲಾ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ದಕ್ಷಿಣ ಆಫ್ರಿಕ ವಿರುದ್ಧ ಭಾರತದ ಕ್ರಿಕೆಟ್ ತಂಡ ಸತತ ಎರಡು ಟೆಸ್ಟ್‌ಗಳಲ್ಲಿ ಸೋಲು ಅನುಭವಿಸಿ ಸರಣಿ ಕಳೆದುಕೊಂಡಿತು. ಅಮೋಘ ಬೌಲಿಂಗ್ ಪ್ರದರ್ಶನದ ಮೂಲಕ ಅಂತಿಮ ಟೆಸ್ಟ್‌ನಲ್ಲಿ ಜಯ ಗಳಿಸಿತು.

ಫಲಿತಾಂಶ ಭಾರತದ ಪರ ಇರಲಿಲ್ಲ. ಕೊನೆಯ ಟೆಸ್ಟ್‌ನಲ್ಲಿ ಬೌಲರ್‌ಗಳು ಜಯ ಗಳಿಸಿದರು. ಭಾರತದ ಬೌಲರ್‌ಗಳು ಆಫ್ರಿಕದ ದಾಂಡಿಗರನ್ನು ಒತ್ತಡಕ್ಕೆ ಸಿಲುಕಿಸಿದ್ದರು. ಆದರೆ ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತಕ್ಕೆ ಗೆಲುವು ಸಾಧ್ಯವಾಗಲಿಲ್ಲ. ಅದೃಷ್ಟ ಕೈಕೊಟ್ಟಿತು ಎಂದು ಅಝರ್ ಹೇಳಿದರು.

  ಕೊನೆಯ ಟೆಸ್ಟ್‌ನಲ್ಲಿ ಗೆಲುವಿನಿಂದಾಗ ತಂಡದ ಗೌರವವನ್ನು ಉಳಿಸಿಕೊಂಡಂತಾಗಿದೆ. ಭಾರತದ ಕ್ರಿಕೆಟ್ ತಂಡ ಕಠಿಣ ಪರಿಸ್ಥಿತಿಯಲ್ಲಿ ಚೆನ್ನಾಗಿ ಆಡಿದೆ. ಬೌಲಿಂಗ್‌ನಂತೆ ಬ್ಯಾಟಿಂಗ್‌ನಲ್ಲೂ ತಂಡದ ಪ್ರದರ್ಶನ ಚೆನ್ನಾಗಿಕಂಡು ಬಂದಿದ್ದರೆ ಭಾರತಕ್ಕೆ ಸರಣಿ ಗೆಲ್ಲಲು ಸಾಧ್ಯವಿತ್ತು. ಏಕದಿನ ಸರಣಿಯಲ್ಲಿ ಚೆನ್ನಾಗಿ ಆಡಿ ಭಾರತ ಸರಣಿ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಅಝರ್ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News