ಫೆ. 3ರಿಂದ ಒಡ್ಡೂರು ಫಾರ್ಮ್‌ನಲ್ಲಿ ಕೃಷಿ ಸಂಗಮ

Update: 2018-01-30 18:03 GMT

ಮಂಗಳೂರು, ಜ. 30: ನಗರದ ಅರುಣ್ಯ ಫೌಂಡೇಶನ್ ಆಯೋಜಿಸಿರುವ ಕೃಷಿ ಸಂಗಮ - ಕೃಷಿ ಪರಿವಾರದ ಸಮಾಗಮ ಕಾರ್ಯಕ್ರಮವು ಫೆ. 3 ಮತ್ತು 4ರಂದು ಗಂಜಿಮಠ ಬಳಿಯ ಒಡ್ಡೂರು ಫಾರ್ಮ್‌ನಲ್ಲಿ ನಡೆಯಲಿದೆ.

ಫೆ. 3ರ ಬೆಳಗ್ಗೆ ಭತ್ತದ ತಳಿ ತಪಸ್ವಿ ಆರ್. ಕೆ. ದೇವ್‌ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೃಷಿಕರ ಸಬಲೀಕರಣಕ್ಕಾಗಿ ಅರುಣ್ಯ ಫೌಂಡೇಶನ್, ಪ್ರಧ್ವಾನ್ ಟೆಕ್ನಾಲಜೀಸ್ ಮಂಗಳೂರು ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಫಾರ್ಮ್‌ಸರ್ಜ್ ಆ್ಯಪ್ ಅನ್ನು ದ.ಕ. ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಎಚ್. ಲೋಕಾರ್ಪಣೆ ಮಾಡಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಪಿ. ಚೌಡಪ್ಪ, ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ, ಮೂಡಬಿದ್ರೆ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ ಮುಖ್ಯ ಅತಿಥಿಗಳಾಗಿ ಭಾಗವಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಶಿವಕುಮಾರ್ ಮಗದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಒಡ್ಡೂರು ಫಾರ್ಮ್‌ನ ಯು. ರಾಜೇಶ್ ನಾಕ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಫೆ. 4ರಂದು ಬೆಳಗ್ಗೆ ‘ಕೃಷಿ ಮತ್ತು ಯುವಜನತೆ: ಸವಾಲುಗಳು-ಸಾಧ್ಯತೆಗಳು’ ವಿಚಾರ ಮಂಥನ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಉದಯವಾಣಿಯ ನಿವೃತ್ತ ಹಿರಿಯ ಉಪಸಂಪಾದಕ ನಿತ್ಯಾನಂದ ಪಡ್ರೆ, ಹಸಿರುವಾಸಿ ಪತ್ರಿಕೆಯ ಸಂಪಾದಕ ರಾಧಾಕೃಷ್ಣ ಭಡ್ತಿ, ದಕ್ಷಿಣ ಕನ್ನಡ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಕುಮಾರ್ ಮಗದ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕ ಪಿ.ಎಸ್. ಶ್ರೀಕಂಠಮೂರ್ತಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ದ.ಕ. ಜಿಲ್ಲಾ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಎಚ್. ಆರ್. ನಾಕ್, ಸುಜಾತಾ ಸಂಚಿಕೆಯ ಸಂಪದಾಕ ರಾಧಾಕೃಷ್ಣ ಹೊಳ್ಳ, ಜೆಸಿಐ ಮಂಗಳೂರಿನ ಅಧ್ಯಕ್ಷೆ ಜೆಸಿ ಶೈಲಜಾ ಎ. ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೆಸಿಐ ಮಂಗಳೂರು ಇದರ ಸಹಯೋಗದೊಂದಿಗೆ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ.

ಕೃಷಿ ಸಂಗಮ ವಿಶೇಷತೆಗಳು: ಜ್ಞಾನ ಪ್ರಸಾರದ ನಿಟ್ಟಿನಲ್ಲಿ ನಡೆಯುವ ಕೃಷಿ ಸಂಗಮದಲ್ಲಿ ಡ್ರೋನ್, ರಬ್ಬರ್ ಟ್ಯಾಪಿಂಗ್, ಸ್ವಯಂಚಾಲಿತ ಮರ ಹತ್ತುವ ಯಂತ್ರಗಳ ವಿಶೇಷ ಆಕರ್ಷಣೆ ಇರಲಿದ್ದು, ಗೃಹಪಯೋಗಿ ಯಂತ್ರಗಳು, ಬೆಳೆ ಆಧರಿತ ಕೃಷಿ ಯಂತ್ರೋಪಕರಣಗಳು, ಯಂತ್ರೋಪಕರಣಗಳ ವಿಶೇಷ ಪ್ರಾತ್ಯಕ್ಷಿಕೆ, ವಿಶೇಷ ಕಾರ್ಯಾಗಾರಗಳು, ನೂತನ ಆಹಾರ ಉತ್ಷನ್ನಗಳ ಪ್ರದರ್ಶನ, ಮಾರಾಟ, ರೈತ-ಕೃಷಿ ಕೇಂದ್ರಿತ ಸಂವಾದ-ಚರ್ಚೆಗಳು, ರೈತ-ಕೃಷಿ ಯಶೋಗಾಥೆಯ ವೀಡಿಯೊ ಪ್ರದರ್ಶನ, ಶಾಲಾ-ಕಾಲೇಜು ಮಕ್ಕಳಿಗೆ ಮತ್ತು ಸಾರ್ವಜನಿಕರಿಗಾಗಿ ಕೃಷಿ ಸಂಬಂಧಿತ ಸ್ಪರ್ಧೆಗಳು ನಡೆಯಲಿವೆ.

ಕೃಷಿ ಸಂಗಮಕ್ಕೆ ವಿವಿಧ ಸರಕಾರಿ ಹಾಗೂ ಖಾಸಗಿ ಸಂಘ ಸಂಸ್ಥೆಗಳು ಸಹಯೋಗವನ್ನು ನೀಡಿವೆ. ದಕ್ಷಿಣ ಕನ್ನಡ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ದ.ಕ. ಜಿಲ್ಲಾ ಕೃಷಿ ಇಲಾಖೆ, ದ.ಕ. ಜಿಲ್ಲಾ ತೋಟಗಾರಿಕಾ ಇಲಾಖೆ, ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಗಳು, ಜ್ಞಾನ ಸಹಯೋಗವನ್ನು ನೀಡಲಿವೆ.

ಕಾರ್ಯಕ್ರಮ ಆಯೋಜನೆಗೆ ಕೃಷಿ ವಿಚಾರ ವಿನಿಮಯ ಕೇಂದ್ರ, ಮೂಡುಬಿದಿರೆ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಪುತ್ತೂರಿನ ಸಮೃದ್ಧಿ ಗಿಡಗೆಳೆತನ ಸಂಘ ಹಾಗೂ ಜೆಸಿಐ ಮಂಗಳೂರು ಸಹಕರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News