ಜಯಲಲಿತಾ ನೀಡಿದ ಖಾರ ಊಟ!

Update: 2018-01-31 14:28 GMT

1991ರ ಲೋಕಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ರಾಜೀವ್ ಗಾಂಧಿಯವರ ಜತೆಯಲ್ಲೇ ಇದ್ದೆ ನಾನು. ಆಗ ಅವರು ಎಐಸಿಸಿ ಅಧ್ಯಕ್ಷರಾಗಿದ್ದರು, ಅಧಿಕಾರದಲ್ಲಿರಲಿಲ್ಲ. ಪ್ರಧಾನಮಂತ್ರಿ ಸ್ಥಾನ ಹೋಗಿತ್ತು. ಏಪ್ರಿಲ್ 17-18ಕ್ಕೆ ಚೆನ್ನೈಗೆ ಹೋಗಿದ್ದೆವು. ಒಂದು ಸಣ್ಣ ವಿಮಾನದಲ್ಲಿ ನಾವಿಬ್ಬರೇ. ಅಲ್ಲಿಗೆ ಹೋಗಿ ಎಐಎಡಿಎಂಕೆ ಜತೆ ಮೈತ್ರಿಯ ಮಾತುಕತೆ ನಡೆಸಬೇಕಿತ್ತು. ನಾನು ಎಐಸಿಸಿ ಜನರಲ್ ಸೆಕ್ರೆಟರಿ ಅಲ್ಲದೆ ತಮಿಳುನಾಡಿನ ಚಾರ್ಜ್ ಕೂಡ ಆಗಿದ್ದೆ. ಹೋಗಿ ಅಲ್ಲಿ ಮಾತುಕತೆ ಕೂಡ ಆಯಿತು. ಅಲ್ಲಿ ವಿದೇಶಿ ಮಂತ್ರಿಯಾಗಿದ್ದ ದಿನೇಶ ಸಿಂಗ್ ಇದ್ದರು. ಚರ್ಚೆ ನಡೆಯಿತು. ಮಧ್ಯಾಹ್ನ ಊಟ ಜಯಲಲಿತಾ ಮನೆಯಲ್ಲಿ. ಊಟ ಖಾರವೆಂದರೆ ಬಾಯಿಗೆ ಇಡಲು ಸಾಧ್ಯವಾಗುತ್ತಿರಲಿಲ್ಲ. ರಾಜೀವ್ ಊಟ ಮಾಡುವಾಗ ಕೆಂಪು ಕೆಂಪಾಗಿದ್ದರು. ಬೆವರಿಳಿಯುತ್ತಿತ್ತು. ನಮಗೆ ಆ ಊಟವನ್ನು ಮುಟ್ಟಲು ಕೂಡ ಸಾಧ್ಯವಾಗಲಿಲ್ಲ. ನಾನು ಸ್ವಲ್ಪವೇ ತಿಂದೆ. ಜಯಲಲಿತಾ ಇದನ್ನೆಲ್ಲ ನೋಡುತ್ತಿದ್ದರು. ಅದು ಬಡಿಸಿ, ಇದು ಬಡಿಸಿ, ಅದು ಕೊಡಿ ಇದು ಕೊಡಿ ಎಂದು ಬಡಿಸುವವರಿಗೆ ಆಜ್ಞೆ ಮಾಡುತ್ತಿದ್ದರು. ನನ್ನ ಎಲೆಯಲ್ಲಿ ಏನೂ ತಿಂದಿರಲಿಲ್ಲ. ಇದನ್ನು ನೋಡಿದ ಜಯಲಲಿತಾ ಅವರು ‘ಪೂಜಾರಿಜೀ ಹ್ಯಾಸ್ ನಾಟ್ ಈಟನ್ ಎನಿಥಿಂಗ್’ ಎಂದು ಹೇಳಿದರು. ಅವರಿಗೆ ನನ್ನ ಮೇಲೆ ಮೊದಲೇ ಅಸಮಾಧಾನ ಇತ್ತು. ನಾನು ಮಂತ್ರಿಯಾಗಿದ್ದಾಗ ಅವರ ತೆರಿಗೆ ಎಷ್ಟು ಬಾಕಿಯಿತ್ತು ಎನ್ನುವುದರ ಎಲ್ಲಾ ವಿವರ ಬಹಿರಂಗ ಮಾಡಿದ್ದೆ. ಅದು ಪತ್ರಿಕೆಗಳಲ್ಲೂ ಬಂದಿತ್ತು. ಹಾಗೆ ಹೇಮಮಾಲಿನಿ ಬಗ್ಗೆ ಕೂಡ ಹೇಳಿದ್ದೆ. ಅವರು ಕೂಡ ರಾಜೀವ್ ಗಾಂಧಿಗೆ ದೂರು ಕೊಟ್ಟಿದ್ದರು. ಜಯಲಲಿತಾ ಕೂಡ ದೂರು ನೀಡಿದ್ದರು. ನನ್ನ ಬಳಿ ರಾಜೀವ್ ಎರಡು ಸಲ ‘ಹೌದಾ ? ಸುಳ್ಳು ಮಾಹಿತಿ ನೀಡಿದ್ದೀರಂತೆ’ ಎಂದು ನನ್ನಲ್ಲಿ ಕೇಳಿದ್ದರು. ‘ದಾಖಲೆ ಸಿಕ್ಕಿದೆ ನಮಗೆ, ಹೇಳಬಾರದಾ ಸರ್’ ಎಂದು ಕೇಳಿದ್ದೆ. ‘ಒಳ್ಳೆಯದಾಯಿತು. ತಪ್ಪು ಅಂಕಿ ಅಂಶ ಕೊಡಲಿಲ್ಲವಲ್ಲ. ಹಾಗಾದರೆ ಡೋಂಟ್ ವರಿ’ ಎಂದಿದ್ದರು ರಾಜೀವ್.

ಈ ವಿಚಾರ ಜಯಲಲಿತಾ ತಲೆಯಲ್ಲಿತ್ತು. ‘ಪೂಜಾರಿಜೀ ಈಸ್ ನಾಟ್ ಈಟಿಂಗ್’ (ಪೂಜಾರಿಯವರು ತಿನ್ನುತ್ತಿಲ್ಲ) ಅಂತ ಹೇಳಿದರು. ಅದಕ್ಕೆ ರಾಜೀವ್ ಗಾಂಧಿ ಹೇಳಿದ್ದು – ‘ಹಿ ಈಸ್ ಎ ಪೂವರ್ ಈಟರ್’ ! (ಅವರು ಹೆಚ್ಚು ತಿನ್ನುವವರಲ್ಲ).

ಅದೇ ದಿನ ಚೆನ್ನೈನ ಮರೀನಾ ಕಡಲ ದಂಡೆಯಲ್ಲಿ ಕಾಂಗ್ರೆಸ್ ಮತ್ತು ಎಐಎಡಿಎಂಕೆಯ ಬಹುದೊಡ್ಡ ಸಭೆ. ಈ ಸಮಾರಂಭ ನಡೆದದ್ದು ಕತ್ತಲಾದ ಮೇಲೆ, ಸಭೆ ಮುಗಿದ ನಂತರ ಅದೇ ಸಣ್ಣ ವಿಮಾನದಲ್ಲಿ ವಾಪಸ್ ದೆಹಲಿಗೆ ಬಂದೆವು.  ಕೆಲವು ಸಲ ರಾಜೀವ್ ಅವರೇ ಪೈಲಟ್ ಆಗುತ್ತಿದ್ದರು. ಅವರೇ ವಿಮಾನ ಬಿಡುತ್ತಿದ್ದರು. ದೆಹಲಿಯಲ್ಲಿ ವಿಮಾನ ಇಳಿದು ಮನೆ ತಲುಪುವಾಗ ಬೆಳಗಿನ ಜಾವ 3:50-4:00 ಗಂಟೆಯಾಗಿತ್ತು. ನನ್ನ ಮನೆ ಬಂತು. ರಾಜೀವ್ ಗಾಂಧಿ ನನ್ನನ್ನು ಮನೆವರೆಗೆ ಬಿಡಲೆಂದು ಮನೆಯ ಗೇಟ್ ಒಳಗೆ ಬಂದರು. “ನಾನು ಹೋಗ್ತೇನೆ ಸರ್, ನೀವು ಬರುವುದು ಬೇಡ” ಎಂದು ಕೋರಿಕೊಂಡರೂ ಕೇಳಲಿಲ್ಲ. ‘ಬೆಳಗ್ಗೆ 7 ಗಂಟೆಗೆ ಸೆಂಟ್ರಲ್ ಎಲೆಕ್ಷನ್ ಕಮಿಟಿ ಸಭೆ ಇದೆ. ಈಗಾಗಲೇ 4 ಗಂಟೆಯಾಯ್ತು. ನನ್ನನ್ನು ಬಿಡಲು ಬರುವುದು ಬೇಡ’ ಎಂದು ಒತ್ತಾಯಿಸಿ ಕಳುಹಿಸಿದೆ. ಆಗ ಅವರು ಹೇಳಿದರು – ‘ಪೂಜಾರಿಜೀ ಐ ಕೇಮ್ ಟು ನೋ, ಇನ್ ಅವರ್ ಪಾರ್ಟಿ ವೆರಿ ಫ್ಯೂ ಆರ್ ದೇರ್ ಲೈಕ್ ಯು. (ಪೂಜಾರಿಯವರೇ ನಿಮ್ಮಂಥವರು ನಮ್ಮ ಪಕ್ಷದಲ್ಲಿ ಕೆಲವೇ ಮಂದಿ ಇದ್ದಾರೆಂದು ನನಗೆ ಗೊತ್ತು). ನನಗೆ ಯಾರು ಹೇಗೇಂತ ಗೊತ್ತಾಯ್ತು’ (ಹೂ ಈಸ್ ಹೂ)

ಬೆಳಗ್ಗೆ 7 ಗಂಟೆಗೆ ಸೆಂಟ್ರಲ್ ಎಲೆಕ್ಷನ್ ಕಮಿಟಿ ಸಭೆ ಆರಂಭವಾಯಿತು. ರಾಜೀವ್ ಗಾಂಧಿ ಮನೆಯಲ್ಲಿ. ನಾನು ಆ ಕಮಿಟಿಯ ಚಾರ್ಜ್ ಆಗಿದ್ದೆ. ನನ್ನ ಕ್ಷೇತ್ರದಲ್ಲಿ ನನ್ನ ಸ್ಪರ್ಧೆಯನ್ನು ಘೋಷಣೆ ಮಾಡಿದರು. ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತ ಹೋದೆವು. ಇನ್ನೂ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಾಕಿ ಇತ್ತು. ‘ನನಗೆ ನಾಮಿನೇಶನ್ ಫೈಲ್ ಮಾಡಲಿಕ್ಕಿದೆ. ಇನ್ನು ಎರಡು ದಿನ ಮಾತ್ರ ಇರುವುದು. ನಾನು ಮಂಗಳೂರಿಗೆ ಹೊರಡುತ್ತೇನೆ’ ಅಂತ ಹೇಳಿದೆ. ‘ಆಯ್ತು, ಆಲ್ ದ ಬೆಸ್ಟ್’ ಅಂತ ರಾಜೀವ್ ಗಾಂಧಿ ಒಪ್ಪಿಗೆ ನೀಡಿ ಕಳುಹಿಸಿಕೊಟ್ಟರು. ನಾನು ದೆಹಲಿಯಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದೆ.

ಮರುದಿವಸ ರಾಜೀವ್ ಗಾಂಧಿ ನನ್ನ ಚುನಾವಣಾ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದರು. ನೆಹರೂ ಮೈದಾನದಲ್ಲಿ ಪ್ರಚಾರ ಸಭೆ. ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಬಂದವರು ಕಂಕನಾಡಿಯಲ್ಲಿ ಇಳಿದರು. ಅಲ್ಲಿ ಮಾರ್ಗದ ಇಕ್ಕೆಡೆಗಳಲ್ಲಿ ತುಂಬಾ ಜನರು ಅವರನ್ನು ನೋಡಲು ಸೇರಿದ್ದರು. ಜನರನ್ನು ಕಂಡವರು ಕಾರಿನಿಂದ ಇಳಿದು ನಡೆದುಕೊಂಡು ಕಂಕನಾಡಿ ಜಂಕ್ಷನ್ ನಿಂದ ನೆಹರೂ ಮೈದಾನದವರೆಗೆ ಕಾಲ್ನಡಿಗೆಯಲ್ಲಿ ಹೊರಟರು. ನೆಹರೂ ಮೈದಾನದಲ್ಲಿ ಲಕ್ಷಾಂತರ ಮಂದಿ ಸೇರಿದ್ದರು. ಪ್ರಚಾರ ಸಭೆಯಲ್ಲಿ ‘ಪೂಜಾರಿಯವರನ್ನು ಗೆಲ್ಲಿಸಿ’ ಎಂದು ಮನವಿ ಮಾಡಿದರು. ಜೊತೆಗೆ ‘ಪ್ರಾಮಾಣಿಕರು ಐದು ಮಂದಿ ಪೂಜಾರಿಯಂಥವರು ಇದ್ದರೆ ಕಾಂಗ್ರೆಸ್ ಸಾಯುವುದಿಲ್ಲ’ ಎಂದು ಬಿಟ್ಟರು. ಕಾರ್ಯಕ್ರಮ ಮುಗಿದ ನಂತರ ಅವರನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದೆವು. ಅವರು ಅಲ್ಲಿಂದ ಆಂಧ್ರಪ್ರದೇಶಕ್ಕೆ ಹೋಗಿ ಮುಂದೆ ಚೆನ್ನೈಗೆ ಹೋದರು. 

ಬಿ.ಜನಾರ್ದನ ಪೂಜಾರಿಯವರ ಆತ್ಮಕಥೆ ‘ಸಾಲಮೇಳದ ಸಂಗ್ರಾಮ’ದ ಆಯ್ದ ಭಾಗಗಳು

ಪ್ರಕಾಶಕರು: ಸಂತೋಷ್ ಕುಮಾರ್ ಪೂಜಾರಿ ಮತ್ತು ದೀಪಕ್ ಪೂಜಾರಿ, ಚೆನ್ನಮ್ಮ ಕುಟೀರ, ಬಂಟ್ವಾಳ ಮೂಡ ಗ್ರಾಮ, ಬಿ.ಸಿ.ರೋಡ್ ಅಂಚೆ, ಜೋಡುಮಾರ್ಗ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ, ಪಿನ್: 574219

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News