×
Ad

ಬ್ರಿಟಿಷರ ಕಾಲದ 1,000 ಕಾನೂನುಗಳ ರದ್ದತಿಗೆ ಉ. ಪ್ರದೇಶ ಸರಕಾರ ಚಿಂತನೆ

Update: 2018-01-31 20:05 IST

ಲಕ್ನೊ, ಜ.31: ದೇಶದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶ ಸರಕಾರವು ಬ್ರಿಟಿಷರ ಕಾಲದ ಒಂದು ಸಾವಿರ ಕಾನೂನುಗಳನ್ನು ರದ್ದುಪಡಿಸುವ ಚಿಂತನೆಯನ್ನು ಮಾಡಿದೆ. ಈ ಕಾನೂನುಗಳ ಪೈಕಿ ಕೆಲವೊಂದು 150 ವರ್ಷಗಳಷ್ಟು ಹಳೆಯದಾಗಿದ್ದು, ಇವೆಲ್ಲವನ್ನೂ ಏಕಕಾಲದಲ್ಲಿ ರದ್ದುಮಾಡಲು ಸರಕಾರ ಯೋಚಿಸಿದೆ.

ಇಂಥ ಹಳೆಯ ಕಾನೂನುಗಳ ಪಟ್ಟಿಯನ್ನು ಸಿದ್ಧಪಡಿಸಿರುವ ಆದಿತ್ಯನಾಥ್ ಸರಕಾರ ಈ ಸಂಬಂಧ ಮಸೂದೆಯನ್ನು ಮುಂದಿನ ಬಜೆಟ್ ಅಧಿವೇಶನದಲ್ಲಿ ಮಂಡಿಸಲಿದೆ. ಹಲವು ವರ್ಷಗಳಿಂದ ಹೊಸದಾಗಿ ಜಾರಿಗೆ ತರಲಾಗಿರುವ ಕಾನೂನುಗಳಿಂದಾಗಿ ಇಂದಿನ ಕಾಲದಲ್ಲಿ ಹಳೆಯ ಕಾನೂನುಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿವೆ. ಹಾಗಾಗಿ ಅವುಗಳನ್ನು ರದ್ದುಮಾಡಲು ಯೋಚಿಸಲಾಗಿದೆ ಎಂದು ಉತ್ತರ ಪ್ರದೇಶದ ಕಾನೂನು ಸಚಿವರಾದ ಬೃಜೇಶ್ ಪಾಠಕ್ ತಿಳಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಲೋಕಸಭೆ ಕೂಡಾ 1911ರ ರಾಷ್ಟ್ರದ್ರೋಹ ಸಭೆ ತಡೆ ಕಾಯ್ದೆ ಸೇರಿದಂತೆ ಇತರ 245 ಹಳೆಯ ಕಾನೂನುಗಳನ್ನು ರದ್ದುಪಡಿಸುವ ಮಸೂದೆಯನ್ನು ಅಂಗೀಕರಿಸಿತ್ತು. ಮೋದಿ ಸರಕಾರ ಬಂದ ನಂತರ 1,800 ಹಳೆಯ ಕಾನೂನುಗಳನ್ನು ತೆಗೆದುಹಾಕಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಇದಕ್ಕೂ ಮೊದಲು 1950ರಲ್ಲಿ 1,029 ಕಾನೂನುಗಳನ್ನು ರದ್ದುಪಡಿಸಲಾಗಿತ್ತು.

2014ರಲ್ಲಿ 20ನೇ ಭಾರತೀಯ ಕಾನೂನು ಆಯೋಗದ ಮುಖ್ಯಸ್ಥರಾಗಿದ್ದ ಎ.ಪಿ ಶಾ ಅವರು, ಹಳೆಯ ಕಾನೂನುಗಳ ಗುರುತಿಸುವಿಕೆ ಯೋಜನೆಯಡಿ ಅಪ್ರಸ್ತುತ ಕಾನೂನುಗಳನ್ನು ರದ್ದುಮಾಡುವ ಪ್ರಕ್ರಿಯೆಯನ್ನು ಮುಂದುವರಿಸುವಂತೆ ಕಾನೂನು ಸಚಿವರಿಗೆ ಸೂಚಿಸಿದ್ದರು.

ಈ ಪ್ರಕ್ರಿಯೆಯ ಉದ್ದೇಶವು ಉತ್ತಮ ಮತ್ತು ದೀರ್ಘಕಾಲೀನವಾಗಿದೆ. ಅದರಲ್ಲಿ ಕಾನೂನು ಮತ್ತು ಕಾನೂನಾತ್ಮಕ ರಚನೆಗಳ ಆಧುನೀಕರಣ ಮತ್ತು ಸುಧಾರಣೆಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆಗಳು ಕೂಡಾ ಸೇರಿವೆ. ಇಂಥ ಪ್ರಕ್ರಿಯೆಯು ಹಳೆಯ ಮತ್ತು ಈ ಕಾಲಕ್ಕೆ ಪ್ರಸ್ತುತವಲ್ಲ ಎಂದು ಎನಿಸುವ ಕಾನೂನುಗಳನ್ನು ರದ್ದು ಮಾಡುವ ಮೂಲಕ ಆರಂಭಿಸಬೇಕಿದೆ ಎಂದು ಆಯೋಗವು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News