×
Ad

‘ವಿಶ್ವ ಪ್ರಜಾಪ್ರಭುತ್ವ ಸೂಚಿ’: 42ನೆ ಸ್ಥಾನಕ್ಕೆ ಕುಸಿದ ಭಾರತ

Update: 2018-01-31 20:40 IST

ಹೊಸದಿಲ್ಲಿ,ಜ.31: ಹೆಚ್ಚುತ್ತಿರುವ ಮಡಿವಂತಿಕೆಯ ಧಾರ್ಮಿಕ ಸಿದ್ಧಾಂತಗಳು, ಗೋರಕ್ಷಕರ ಹಾವಳಿ ಹಾಗೂ ಅಲ್ಪಸಂಖ್ಯಾತರು ಮತ್ತು ಇತರ ಭಿನ್ನಾಭಿಪ್ರಾಯಗಳ ಧ್ವನಿಗಳ ನಡುವೆ ವಾರ್ಷಿಕ ಜಾಗತಿಕ ಪ್ರಜಾಪ್ರಭುತ್ವ ಸೂಚಿಯಲ್ಲಿ ಭಾರತವು 32ನೇ ಸ್ಥಾನದಿಂದ 42ಕ್ಕೆ ಕುಸಿದಿದೆ.

ಬ್ರಿಟನ್‌ನ ಪ್ರತಿಷ್ಠಿತ ಮಾಧ್ಯಮ ಸಮೂಹ ‘ದಿ ಇಕನಾಮಿಸ್ಟ್ ಗ್ರೂಪ್’ನ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗವಾಗಿರುವ ‘ಇಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್(ಇಐಯು)’ ಸಿದ್ಧಪಡಿಸಿರುವ ಈ ಸೂಚಿಯಲ್ಲಿ ನಾರ್ವೆ ಮತ್ತೊಮ್ಮೆ ಅಗ್ರಸ್ಥಾನದಲ್ಲಿದ್ದು, ಐಸ್‌ಲ್ಯಾಂಡ್ ಮತ್ತು ಸ್ವೀಡನ್ ನಂತರದ ಸ್ಥಾನಗಳಲ್ಲಿವೆ. ಕಳೆದ ವರ್ಷ 32ನೇ ಸ್ಥಾನದಲ್ಲಿದ್ದ ಭಾರತವು ಈ ವರ್ಷ 42ನೇ ಸ್ಥಾನಕ್ಕೆ ಜಾರಿದ್ದು, ‘ದೋಷಪೂರಿತ ಪ್ರಜಾಪ್ರಭುತ್ವ’ಗಳ ವರ್ಗಕ್ಕೆ ಸೇರಿಸಲ್ಪಟ್ಟಿದೆ.

ಜಾಗತಿಕ ಪ್ರಜಾಪ್ರಭುತ್ವ ಸೂಚಿಯಲ್ಲಿ ಚುನಾವಣಾ ಪ್ರಕ್ರಿಯೆ ಮತ್ತು ಬಹುತ್ವ, ನಾಗರಿಕ ಸ್ವಾತಂತ್ರ್ಯಗಳು, ಸರಕಾರದ ಕಾರ್ಯವೈಖರಿ, ರಾಜಕೀಯ ಸಹಭಾಗಿತ್ವ ಮತ್ತು ರಾಜಕೀಯ ಸಂಸ್ಕೃತಿ ಈ ಐದು ವರ್ಗಗಳ ಆಧಾರದಲ್ಲಿ 165 ಸ್ವತಂತ್ರ ರಾಷ್ಟ್ರಗಳು ಮತ್ತು ಎರಡು ಪ್ರದೇಶಗಳಿಗೆ ಸ್ಥಾನಗಳನ್ನು ನೀಡಲಾಗುತ್ತದೆ. ಪಟ್ಟಿಯನ್ನು ಸಂಪೂರ್ಣ ಪ್ರಜಾಪ್ರಭುತ್ವ, ದೋಷಪೂರಿತ ಪ್ರಜಾಪ್ರಭುತ್ವ, ಮಿಶ್ರ ಆಡಳಿತ ವ್ಯವಸ್ಥೆ ಮತ್ತು ನಿರಂಕುಶ ಪ್ರಭುತ್ವ ಹೀಗೆ ನಾಲ್ಕು ವರ್ಗಗಳಲ್ಲಿ ವಿಭಾಗಿಸಲಾಗಿದೆ.

21ನೇ ಸ್ಥಾನದಲ್ಲಿರುವ ಅಮೆರಿಕದ ಜೊತೆಗೆ ಜಪಾನ್, ಇಟಲಿ, ಫ್ರಾನ್ಸ್, ಇಸ್ರೇಲ್, ಸಿಂಗಾಪುರ ಮತ್ತು ಹಾಂಗ್‌ಕಾಂಗ್‌ಗಳೂ ದೋಷಪೂರಿತ ಪ್ರಜಾಪ್ರಭುತ್ವಗಳ ಗುಂಪಿನಲ್ಲಿ ಸೇರಿವೆ.

ನ್ಯೂಝಿಲ್ಯಾಂಡ್ ಮತ್ತು ಡೆನ್ಮಾರ್ಕ್ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿದ್ದರೆ ಐರ್ ಲ್ಯಾಂಡ್, ಕೆನಡಾ, ಆಸ್ಟ್ರೇಲಿಯಾ, ಫಿನ್ಲ್ಯಾಂಡ್ ಮತ್ತು ಸ್ವಿಝರ್ ಲ್ಯಾಂಡ್ ಮೊದಲ ಹತ್ತು ಸ್ಥಾನಗಳಲ್ಲಿರುವ ಇತರ ರಾಷ್ಟ್ರಗಳಾಗಿವೆ.

ಕೇವಲ 19 ಅಗ್ರರಾಷ್ಟ್ರಗಳನ್ನು ‘ಸಂಪೂರ್ಣ ಪ್ರಜಾಪ್ರಭುತ್ವಗಳು’ ಎಂದು ವರ್ಗೀಕರಿಸಲಾಗಿದೆ. ಪಾಕಿಸ್ತಾನ(110ನೇ ಸ್ಥಾನ), ಬಾಂಗ್ಲಾದೇಶ(92), ನೇಪಾಳ(94)ಮತ್ತು ಭೂತಾನ(99) ಮಿಶ್ರ ಆಡಳಿತ ವ್ಯವಸ್ಥೆಯ ವರ್ಗಕ್ಕೆ ಸೇರಿಸಲ್ಪಟ್ಟಿವೆ.

ಚೀನಾ(139), ಮ್ಯಾನ್ಮಾರ್(120), ರಷ್ಯಾ(135) ಮತ್ತು ವಿಯೆಟ್ನಾಂ(140) ‘ನಿರಂಕುಶ ಪ್ರಭುತ್ವಗಳು’ ಎಂದು ಹೆಸರಿಸಲ್ಪಟ್ಟಿರುವ ಗುಂಪಿನಲ್ಲಿವೆ.

ಉತ್ತರ ಕೊರಿಯಾ(167) ಪಟ್ಟಿಯಲ್ಲಿ ಅತ್ಯಂತ ಕೊನೆಯ ಸ್ಥಾನದಲ್ಲಿದ್ದು, ಸಿರಿಯಾ(166) ಒಂದು ಸ್ಥಾನ ಮೇಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News