×
Ad

ವೇತನದಾರರು ಬಿಲ್ ಸಲ್ಲಿಸದೆ 40,000 ರೂ. ಪಡೆಯಬಹುದು: ಸಿಬಿಡಿಟಿ ಮುಖ್ಯಸ್ಥ

Update: 2018-02-01 22:53 IST

ಹೊಸದಿಲ್ಲಿ, ಫೆ. 1: ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಲೋಕಸಭೆಯಲ್ಲಿ ಘೋಷಿಸಿದ 40,000 ರೂ. ‘ಸ್ಟಾಂಡರ್ಡ್ ಡಿಡಕ್ಷನ್’ ಪಡೆಯಲು ಸಂಬಳ ಪಡೆಯುವ ತೆರಿಗೆ ಪಾವತಿದಾರರು ಹಾಗೂ ಪಿಂಚಣಿದಾರರು ಯಾವುದೇ ಬಿಲ್‌ಗಳು ಅಥವಾ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ.

 ‘‘ಈ ಬಾರಿಯ ಬಜೆಟ್ ಸಂಬಳ ಪಡೆಯುವ ತೆರಿಗೆದಾರರು ಮತ್ತು ಪಿಂಚಣಿದಾರರಿಗೆ 40,000 ರೂ. ಸ್ಟಾಂಡರ್ಡ್ ಡಿಡಕ್ಷನ್ ಎಂಬ ದೊಡ್ಡ ಸೌಲಭ್ಯವನ್ನು ನೀಡಿದೆ’’ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯ ಮುಖ್ಯಸ್ಥ ಸುಶೀಲ್ ಚಂದ್ರ ಹೇಳಿದ್ದಾರೆ.

‘‘ಈ ಮೊದಲು, ಕೆಲವರು ಪ್ರಯಾಣ ಭತ್ತೆ ಮತ್ತು ಕೆಲವು ವೈದ್ಯಕೀಯ ಭತ್ತೆಗಳನ್ನು ಬಿಲ್‌ಗಳನ್ನು ಹಾಜರುಪಡಿಸಿ ಪಡೆಯುತ್ತಿದ್ದರು. ಆದರೆ, ನಾವು ಈಗ ಬಿಲ್‌ಗಳನ್ನು ಹಾಜರುಪಡಿಸಿ ಪಡೆಯುವ ಎಲ್ಲ ವೈಯಕ್ತಿಕ ಭತ್ತೆಗಳನ್ನು ರದ್ದುಪಡಿಸಿದ್ದೇವೆ. ಈಗ ಪ್ರತಿಯೊಬ್ಬ ವೇತನದಾರನಿಗೆ 40,000 ರೂ. ದೊರೆಯುತ್ತದೆ. ನೀವು ಅದನ್ನು ನೇರವಾಗಿ ಪಡೆಯಬಹುದು’’ ಎಂದು ಪಿಟಿಐಯೊಂದಿಗೆ ಮಾತನಾಡಿದ ಅವರು ಹೇಳಿದರು.

ಸಿಬಿಡಿಟಿಯು ಆದಾಯ ತೆರಿಗೆ ಇಲಾಖೆಯ ನೀತಿ ನಿರೂಪಕ ಸಂಸ್ಥೆಯಾಗಿದೆ.

ನೂತನ ನೀತಿಯು ವೇತನ ಪಡೆಯುವ ಎಲ್ಲ ಉದ್ಯೋಗಿಗಳಿಗೆ ಅನ್ವಯಿಸುತ್ತದೆ ಹಾಗೂ ಅದಕ್ಕಾಗಿ ಪೂರಕ ದಾಖಲೆಗಳು ಅಥವಾ ಬಿಲ್‌ಗಳನ್ನು ಸಲ್ಲಿಸುವ ಕಷ್ಟವಿಲ್ಲ ಎಂದು ಅವರು ನುಡಿದರು.

‘‘ಸ್ಟಾಂಡರ್ಡ್ ಡಿಡಕ್ಷನ್ ಎಂದರೆ ದಾಖಲೆಗಳು ಇಲ್ಲದಿರುವುದು ಎಂದರ್ಥ. ಸಂಬಳದಿಂದ 40,000 ಡಿಡಕ್ಷನ್ ಕೊಡುತ್ತೇವೆ’’ ಎಂದರು.

ಈವರೆಗೆ, ಸಾರಿಗೆ ಭತ್ತೆಯಡಿ 19,200 ರೂ. ಮತ್ತು ವೈದ್ಯಕೀಯ ಭತ್ತೆಯಾಗಿ 15,000 ರೂ. ಪಡೆಯಲು ಈ ವರ್ಗದ ತೆರಿಗೆ ಪಾವತಿದಾರರು ವೈದ್ಯಕೀಯ ಬಿಲ್‌ಗಳು ಮತ್ತು ಪ್ರಯಾಣ ವೆಚ್ಚಗಳ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News