ಡಬಲ್ ಚಿನ್ನ ವಂಚಿತ ಪ್ರವೀಣ್, ಕೇರಳದ ಆ್ಯನ್ಸಿಗೆ ಎರಡು ಪದಕ
ಹೊಸದಿಲ್ಲಿ, ಫೆ.1: ತಮಿಳುನಾಡಿನ ಸಿ. ಪ್ರವೀಣ್ ಮೊದಲ ಆವೃತ್ತಿಯ ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್‌ನಲ್ಲಿ ಅವಳಿ ಚಿನ್ನ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು. ಹರ್ಯಾಣದ ಭೂಪಿಂದರ್ ಸಿಂಗ್ ವಿರುದ್ಧ ಶರಣಾಗಿ ಬೆಳ್ಳಿ ಗೆದ್ದುಕೊಂಡರು.
ಪ್ರವೀಣ್ ಗುರುವಾರ ಇಲ್ಲಿ ನಡೆದ ಬಾಲಕರ ಲಾಂಗ್‌ಜಂಪ್‌ನಲ್ಲಿ ತನ್ನ ಕೊನೆಯ ಎರಡು ಪ್ರಯತ್ನದಲ್ಲಿ 6.99 ಮೀ. ಹಾಗೂ 7.04 ಮೀ. ದೂರ ಜಿಗಿದರು. ಪ್ರವೀಣ್ 6.93 ಮೀ.ದೂರಕ್ಕೆ ಜಿಗಿಯುವುದರೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಪ್ರವೀಣ್ ಬುಧವಾರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು. ಟೂರ್ನಿಯಲ್ಲಿ ಎರಡು ಪದಕ ಜಯಿಸಿರುವ ಪ್ರವೀಣ್ ಅವರು ಓಟಗಾರ್ತಿ ಆ್ಯನ್ಸಿ ಸೊಜನ್ ಹಾಗೂ ಜಂಪರ್ ಸಾಂಡ್ರಾ ಬಾಬು ಅವರೊಂದಿಗೆ ಸೇರಿಕೊಂಡರು.
ಪ್ರವೀಣ್ ಟ್ರಿಪಲ್‌ಜಂಪ್ ಹಾಗೂ ಲಾಂಗ್‌ಜಂಪ್‌ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದರು. ಆ್ಯನ್ಸಿ ಕೂಟದ ಎರಡನೇ ದಿನವಾದ ಗುರುವಾರ ಲಾಂಗ್‌ಜಂಪ್ ಹಾಗೂ 200 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಜಯಿಸಿದರು. ಸಾಂಡ್ರಾ ಲಾಂಗ್ ಹಾಗೂ ಟ್ರಿಪಲ್ ಜಂಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
ಕೇರಳದ 16ರ ಹರೆಯದ ಓಟಗಾರ್ತಿ ಆ್ಯನ್ಸಿ 5.80 ಮೀ. ದೂರ ಜಿಗಿದು ಲಾಂಗ್‌ಜಂಪ್‌ನಲ್ಲಿ ಚಿನ್ನ ಜಯಿಸಿದರು. ಬಾಲಕಿಯರ 200 ಮೀ.ಓಟದಲ್ಲಿ 25.13 ನಿಮಿಷದಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಪಂಜಾಬ್‌ನ ಚಾನ್ವೀರ್ ಕೌರ್(24.76) ಮೊದಲ ಸ್ಥಾನ ಪಡೆದರು.
ಕೇರಳದ ಸಾಂಡ್ರಾ ಬಾಬು ಲಾಂಗ್‌ಜಂಪ್‌ನಲ್ಲಿ 5.68 ಮೀ.ದೂರ ಜಿಗಿದು ಬೆಳ್ಳಿ ಜಯಿಸಿದರು. ದಿನದಾರಂಭದಲ್ಲಿ ಟ್ರಿಪಲ್ ಜಂಪ್‌ನಲ್ಲಿ 2ನೇ ಸ್ಥಾನ ಪಡೆದಿದ್ದ ಬಾಬು ಎರಡನೇ ಪದಕ ಜಯಿಸಿದರು. ಮಹಾರಾಷ್ಟ್ರದ ಜಾವೆಲಿನ್ ಎಸೆತಗಾರ ವಿಕಾಸ್ ಯಾದವ್ ಆರನೇ ಹಾಗೂ ಕೊನೆಯ ಪ್ರಯತ್ನದಲ್ಲಿ 75.02 ಮೀ.ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಜಯಿಸಿ ಅಚ್ಚರಿ ಮೂಡಿಸಿದರು. ಹರ್ಯಾಣದ ಯಶ್ವೀರ್ ಸಿಂಗ್(70 ಮೀ.)ಬೆಳ್ಳಿ ಹಾಗೂ ಉತ್ತರಪ್ರದೇಶದ ಅರ್ಪಿತ್ ಯಾದವ್(71.90 ಮೀ.)ಕಂಚು ಜಯಿಸಿದ್ದಾರೆ.
ಬಾಲಕರ 200 ಮೀ. ಓಟದಲ್ಲಿ ಕರ್ನಾಟಕದ ಶಶಿಕಾಂತ್ ವಿಎ 21.80 ನಿಮಿಷದಲ್ಲಿ ಗುರಿ ತಲುಪಿ ಚಿನ್ನ ಜಯಿಸಿದರು. ಮಹಾರಾಷ್ಟ್ರದ ಕರಣ್(21.98 ನಿ.) ಹಾಗೂ ದಿಲ್ಲಿಯ ಅನ್ಶುಲ್(22.27 ಸೆ.) ಎರಡು ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ.