ಬಾಂಗ್ಲಾ ವಿರುದ್ಧ ಶ್ರೀಲಂಕಾ 504/3

Update: 2018-02-02 18:17 GMT

ಚಿತ್ತಗಾಂಗ್, ಫೆ.2: ಕುಸಾಲ್ ಮೆಂಡಿಸ್ ಹಾಗೂ ಧನಂಜಯ ಡಿ’ಸಿಲ್ವಾ ಸಿಡಿಸಿದ ಆಕರ್ಷಕ ಶತಕದ ನೆರವಿನಿಂದ ಶ್ರೀಲಂಕಾ ತಂಡ ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ರನ್ ಮಳೆ ಹರಿಸಿದೆ.

ಮೂರನೇ ದಿನವಾದ ಶುಕ್ರವಾರ ಆಟ ಕೊನೆಗೊಂಡಾಗ ಶ್ರೀಲಂಕಾ 3 ವಿಕೆಟ್‌ಗಳ ನಷ್ಟಕ್ಕೆ 504 ರನ್ ಗಳಿಸಿದೆ. ಬಾಂಗ್ಲಾದೇಶದ ಮೊದಲ ಇನಿಂಗ್ಸ್‌ಗಿಂತ ಕೇವಲ 9 ರನ್ ಹಿಂದಿದೆ. ಬಾಂಗ್ಲಾ ಮೊದಲ ಇನಿಂಗ್ಸ್‌ನಲ್ಲಿ 513 ರನ್ ಗಳಿಸಿ ಆಲೌಟಾಗಿದೆ.

‘ಬರ್ತ್‌ಡೇ ಬಾಯ್’ ಮೆಂಡಿಸ್ 196 ರನ್‌ಗೆ ಔಟಾಗಿ ಕೇವಲ 4 ರನ್‌ನಿಂದ ದ್ವಿಶತಕ ವಂಚಿತರಾದರು. ಡಿ’ಸಿಲ್ವಾ 173 ರನ್ ಗಳಿಸಿ ತಂಡದ ಮೊತ್ತವನ್ನು 500ರ ಗಡಿ ದಾಟಿಸಿದರು.

ದಿನದಾಟದಂತ್ಯಕ್ಕೆ ರೋಶನ್ ಸಿಲ್ವಾ(87) ಹಾಗೂ ನಾಯಕ ದಿನೇಶ್ ಚಾಂಡಿಮಾಲ್(37) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಶ್ರೀಲಂಕಾ 1 ವಿಕೆಟ್ ನಷ್ಟಕ್ಕೆ 187 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. ಡಿ’ಸಿಲ್ವಾ ಹಾಗೂ ಮೆಂಡಿಸ್ 2ನೇ ವಿಕೆಟ್‌ಗೆ 308 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಈ ಜೋಡಿಯನ್ನು ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ ಬೇರ್ಪಡಿಸಿದರು.

ಮುಸ್ತಫಿಝುರ್ರಹ್ಮಾನ್‌ಗೆ ವಿಕೆಟ್ ಒಪ್ಪಿಸುವ ಮೊದಲು ಡಿಸಿಲ್ವಾ 229 ಎಸೆತಗಳನ್ನು ಎದುರಿಸಿ 21 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ನಾಲ್ಕನೇ ಶತಕ ದಾಖಲಿಸಿದರು. ಇಂದು 23ನೇ ವರ್ಷಕ್ಕೆ ಕಾಲಿಟ್ಟಿರುವ ಮೆಂಡಿಸ್ 327 ಎಸೆತಗಳಲ್ಲಿ 22 ಬೌಂಡರಿ, 2 ಸಿಕ್ಸರ್ ನೆರವಿನಿಂದ 196 ರನ್ ಗಳಿಸಿ ಜೀವನಶ್ರೇಷ್ಠ ಇನಿಂಗ್ಸ್ ಆಡಿದರು. ಡಿ’ಸಿಲ್ವಾರೊಂದಿಗೆ ಭರ್ಜರಿ ಜೊತೆಯಾಟ ನಡೆಸಿದ ಮೆಂಡಿಸ್ ಅವರು ರೋಶನ್ ಸಿಲ್ವಾರೊಂದಿಗೆ 3ನೇ ವಿಕೆಟ್‌ಗೆ 107 ರನ್ ಜೊತೆಯಾಟ ನಡೆಸಿದ್ದಾರೆ. ಎಡಗೈ ಸ್ಪಿನ್ನರ್ ಇಸ್ಲಾಮ್ ಎಸೆತವನ್ನು ಬೌಂಡರಿಗಟ್ಟಿದ ಮೆಂಡಿಸ್ 200 ಎಸೆತಗಳಲ್ಲಿ ನಾಲ್ಕನೇ ಶತಕ ಸಿಡಿಸಿದ್ದಾರೆ.

ಇದೇ ವೇಳೆ ಡಿ’ಸಿಲ್ವಾ 154 ರನ್ ಗಳಿಸಿದ ತಕ್ಷಣ ಟೆಸ್ಟ್‌ನಲ್ಲಿ 1,000 ರನ್ ಪೂರೈಸಿದರು. 23ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿರುವ ಡಿ’ಸಿಲ್ವಾ ಅವರು ರಾಯ್ ಡಿಯಾಸ್ ದಾಖಲೆ ಸರಿಗಟ್ಟಿದರು.

ಸಂಕ್ಷಿಪ್ತ ಸ್ಕೋರ್

►ಬಾಂಗ್ಲಾದೇಶ ಪ್ರಥಮ ಇನಿಂಗ್ಸ್: 513

►ಶ್ರೀಲಂಕಾ ಮೊದಲ ಇನಿಂಗ್ಸ್: 504/3

(ಮೆಂಡಿಸ್ 196, ಸಿಲ್ವಾ 173, ರೋಶನ್ ಸಿಲ್ವಾ 87,ದಿನೇಶ್ ಚಾಂಡಿಮಾಲ್ 37)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News