ಅನು ಕುಮಾರ್, ಪೂಜಾಗೆ ಅವಳಿ ಚಿನ್ನ, ನಿಸಾರ್ ಅಹ್ಮದ್ ವೇಗದ ಓಟಗಾರ

Update: 2018-02-02 18:20 GMT

ಹೊಸದಿಲ್ಲಿ,ಫೆ.2: ಮೊದಲ ಆವೃತ್ತಿಯ ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್ ನಲ್ಲಿ ಉತ್ತರಾಖಂಡದ ಅನು ಕುಮಾರ್ ಹಾಗೂ ಹರ್ಯಾಣದ ಪೂಜಾ ವೈಯಕ್ತಿಕ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಅವಳಿ ಚಿನ್ನ ಜಯಿಸಿದ್ದಾರೆ. ದಿಲ್ಲಿಯ ನಿಸಾರ್ ಅಹ್ಮದ್ ಕೂಟದಲ್ಲಿ ಬಾಲಕರ ವಿಭಾಗದಲ್ಲಿ ಅತ್ಯಂತ ವೇಗದ ಓಟಗಾರನಾಗಿ ಹೊರಹೊಮ್ಮಿದರು.

ದಿಲ್ಲಿ, ಮಹಾರಾಷ್ಟ್ರ ಹಾಗೂ ಹರ್ಯಾಣದ ಅಥ್ಲೀಟ್‌ಗಳು ತಲಾ 2 ಚಿನ್ನ ಜಯಿಸಿದರೆ, ಇತರ ಆರು ರಾಜ್ಯಗಳು ತಲಾ ಒಂದು ಚಿನ್ನ ಜಯಿಸಿವೆ. ಜಮೈಕಾ ಪ್ರವಾಸವನ್ನು ಮುಂದೂಡಿರುವ ದಿಲ್ಲಿಯ ಓಟಗಾರ ನಿಸಾರ್ ಅಹ್ಮದ್ 20 ನಿಮಿಷಗಳ ಅಂತರದಲ್ಲಿ ಎರಡು ಬಾರಿ 100 ಮೀ. ಓಟದಲ್ಲಿ ಸ್ಪರ್ಧಿಸಿದರು. ಮೊದಲಿಗೆ 100 ಮೀ. ರೇಸ್‌ನ್ನು 10.77 ಸೆಕೆಂಡ್‌ನಲ್ಲಿ ತಲುಪಿದ ಅಹ್ಮದ್, ಎರಡನೇ ಬಾರಿ 100 ಮೀ. ಓಟವನ್ನು 10.76 ಸೆಕೆಂಡ್‌ನಲ್ಲಿ ತಲುಪಿದರು. ಕರ್ನಾಟಕದ ಅಥ್ಲೀಟ್ ವಿ.ಎ. ಶಶಿಕಾಂತ್(10.90 ಸೆ.) ಎರಡನೇ ಹಾಗೂ ಹರ್ಯಾಣದ ಗೋವಿಂದ್ ಕುಮಾರ್(10.95 ಸೆ.) ಮೂರನೇ ಸ್ಥಾನ ಪಡೆದಿದ್ದಾರೆ.

ನಿಸಾರ್ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್‌ರಿಂದ ಚಿನ್ನದ ಪದಕ ಸ್ವೀಕರಿಸಿದರು. ಕ್ರೀಡಾಸಚಿವರಿಂದ ಪದಕ ಸ್ವೀಕರಿಸಿ ರೋಮಾಂಚನಗೊಂಡರು.

ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಅನು 800 ಮೀ. ಹಾಗೂ 1500 ಮೀ.ಓಟದಲ್ಲಿ ಚಿನ್ನ ಜಯಿಸಿದ್ದಾರೆ. ಹರ್ಯಾಣದ ಪೂಜಾ ಡಿಸ್ಕಸ್ ಹಾಗೂ ಶಾಟ್‌ಪುಟ್‌ನಲ್ಲಿ ಬಂಗಾರ ಗೆದ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News