×
Ad

ಇಸ್ಲಾಮಿಕ್ ವಿದ್ವಾಂಸ ತಾರಿಕ್ ರಮದಾನ್ ವಿರುದ್ಧ ಅತ್ಯಾಚಾರ ಆರೋಪ

Update: 2018-02-03 18:59 IST

ಫ್ರಾನ್ಸ್, ಫೆ.3: ಎರಡು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸ ತಾರಿಕ್ ರಮದಾನ್ ವಿರುದ್ಧ ಫ್ರೆಂಚ್ ನ್ಯಾಯಾಲಯವೊಂದು ಆರೋಪ ಹೊರಿಸಿದೆ.

55 ವರ್ಷದ ರಮದಾನ್ ರನ್ನು ಕಳೆದ ವಾರ ಪೊಲೀಸರು ವಿಚಾರಣೆ ನಡೆಸಿದ್ದು, ಇದೀಗ ಕಸ್ಟಡಿಗೆ ಹಸ್ತಾಂತರಿಸಲಾಗಿದೆ.

ಆದರೆ ತಾರಿಕ್ ಈ ಆರೋಪಗಳನ್ನು ನಿರಾಕರಿಸಿದ್ದು, ದೂರುದಾರರೊಬ್ಬರ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಆಕ್ಸ್ ಫರ್ಡ್ ವಿವಿಯಲ್ಲಿ ಸಮಕಾಲೀನ ಇಸ್ಲಾಮಿಕ್ ಅಧ್ಯಯನಗಳ ಪ್ರಾಧ್ಯಾಪಕರಾಗಿರುವ ತಾರಿಕ್, ತಮ್ಮ ಮೇಲೆ ಆರೋಪಗಳು ಬಂದ ಮೇಲೆ ರಜೆ ಪಡೆದುಕೊಂಡಿದ್ದಾರೆ.

ಇವರ ವಿರುದ್ಧ ಮೊದಲು ಆರೋಪ ಹೊರಿಸಿದವರು ಹೆಂಡಾ ಅಯಾರಿ. ಇವರು ಈಗ ಜಾತ್ಯಾತೀತ ಸ್ತ್ರೀವಾದಿ ಗುಂಪಿನ ಪ್ರಮುಖರಾಗಿದ್ದಾರೆ. 4 ವರ್ಷಗಳ ಹಿಂದೆ ಪ್ಯಾರಿಸ್ ನ ಹೊಟೇಲೊಂದರಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿತ್ತು ಎಂದು ಅಯಾರಿ 2016ರಲ್ಲಿ ಬಿಡುಗಡೆಯಾದ ಪುಸ್ತಕವೊಂದರಲ್ಲಿ ಬರೆದಿದ್ದರು. ಆದರೆ ಅತ್ಯಾಚಾರ ಎಸಗಿದ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿರಲಿಲ್ಲ. ನಂತರ 2017ರಲ್ಲಿ ತಾರಿಕ್ ವಿರುದ್ಧ ಆರೋಪ ಹೊರಿಸಿದ್ದರು.  ಈ  ಬೆಳವಣಿಗೆಯ ನಂತರ ಮತ್ತೋರ್ವ ಮಹಿಳೆಯೂ ತನ್ನನ್ನು ತಾರಿಕ್ ಅತ್ಯಾಚಾರಗೈದಿದ್ದಾರೆ ಎಂದು ಆರೋಪಿಸಿದ್ದರು.

ಸ್ವಿಟ್ಸರ್‌ಲ್ಯಾಂಡ್‌ನ ನಾಲ್ವರು ಮಹಿಳೆಯರೂ ತಾರಿಖ್ ವಿರುದ್ಧ ಲೈಂಗಿಕ ದುರ್ವರ್ತನೆಯ ಆರೋಪ ಮಾಡಿದ್ದಾರೆ. ಜಿನೇವದಲ್ಲಿ ತಾವು ವಿದ್ಯಾರ್ಥಿನಿಯರಾಗಿದ್ದಾಗ ಅವರು ಲೈಂಗಿಕ ದುರ್ವರ್ತನೆ ತೋರಿದ್ದರು ಎಂದು ಅವರು ಹೇಳಿದ್ದಾರೆ.

ಆದರೆ, ಈ ಎಲ್ಲಾ ಆರೋಪಗಳು ಶತ್ರುಗಳು ತನ್ನ ವಿರುದ್ಧ ನಡೆಸುತ್ತಿರುವ ಅಭಿಯಾನದ ಭಾಗವಾಗಿದೆ ಎಂದು ತಾರಿಖ್ ರಮಾದಾನ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News