×
Ad

ದೂರವಾಣಿ ಕರೆಗಳ ವಿವರಗಳ ಮಾರಾಟ : ಮುಂಬೈನ ಖ್ಯಾತ ಮಹಿಳಾ ಡಿಟೆಕ್ಟಿವ್ ಬಂಧನ

Update: 2018-02-03 19:36 IST

ಮುಂಬೈ,ಫೆ.3: ದೂರವಾಣಿ ಕರೆಗಳ ವಿವರಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಕಳೆದ ವಾರ ನಾಲ್ವರು ಪತ್ತೇದಾರರನ್ನು ಬಂಧಿಸಿದ್ದ ಥಾಣೆ ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿಮ್‌ನ ಖ್ಯಾತ ಮಹಿಳಾ ಡಿಟೆಕ್ಟಿವ್ ರಜನಿ ಪಂಡಿತ್(65) ಅವರನ್ನು ಶುಕ್ರವಾರ ಬಂಧಿಸಿದ್ದಾರೆ. ಕಳೆದ 32 ವರ್ಷಗಳಿಂದ ಖಾಸಗಿ ಡಿಟೆಕ್ಟಿವ್ ಆಗಿ ದುಡಿಯುತ್ತಿರುವ ಪಂಡಿತ್ ತನ್ನ ಕಕ್ಷಿದಾರರ ದೂರವಾಣಿ ಕರೆಗಳ ವಿವರಗಳನ್ನು ಮಾರಾಟ ಮಾಡುತ್ತಿದ್ದರು. ವಾರದ ಹಿಂದೆ ಪೊಲೀಸರು ಥಾಣೆ ಜಿಲ್ಲೆಯ ಕಲ್ವಾದಲ್ಲಿ ನಾಲ್ವರು ಖಾಸಗಿ ಪತ್ತೇದಾರರನ್ನು ಬಂಧಿಸಿದ್ದರು. ಆರೋಪಿಗಳು ದೂರವಾಣಿ ಕರೆಗಳ ವಿವರಗಳನ್ನು 25,000 ರೂ.ಗಳಿಂದ 50,000 ರೂ.ವರೆಗಿನ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು.

ಪಂಡಿತ್ ಬಂಧಿತ ಆರೋಪಿಗಳಿಂದ ಸುಮಾರು 15,000 ರೂ.ಗಳಿಗೆ ದೂರವಾಣಿ ಕರೆಗಳ ವಿವರಗಳನ್ನು ಖರೀದಿಸಿ ಬಳಿಕ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಥಾಣೆ ಡಿಸಿಪಿ(ಕ್ರೈಂ) ಅಭಿಷೇಕ ತ್ರಿಮುಖೆ ತಿಳಿಸಿದರು. ಆಕೆ ಯಾರ ಕರೆ ವಿವರಗಳನ್ನು ಖರೀದಿಸಿದ್ದರು ಮತ್ತು ಯಾರಿಗೆ ಮಾರಾಟ ಮಾಡುತ್ತಿದ್ದರು ಎನ್ನುವುದನ್ನು ತಿಳಿದುಕೊಳ್ಳಲು ವಿಚಾರಣೆಗೊಳಪಡಿಸಲಾಗಿದೆ ಎಂದರು.

ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಟೆಲಿಕಾಂ ಸಂಸ್ಥೆಯನ್ನೂ ಸಂಪರ್ಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News