ಕಾಸ್ಗಂಜ್ ನಲ್ಲಿ ಗಣರಾಜ್ಯೋತ್ಸವಕ್ಕೆ ಅಡ್ಡಿಪಡಿಸಿ ಗಲಭೆಗೆ ಕಾರಣವಾದದ್ದು ಯಾರು?

Update: 2018-02-03 16:21 GMT

ಉತ್ತರ ಪ್ರದೇಶ, ಫೆ.3: ಗಣರಾಜ್ಯೋತ್ಸವ ದಿನಾಚರಣೆಯ ದಿನ ಧ್ವಜಾರೋಹಣಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದ ಮುಸ್ಲಿಮರ ಮೇಲೆ ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಇದುವೇ ಕಾಸ್ಗಂಜ್ ಗಲಭೆಯ ಆರಂಭ ಎನ್ನುವುದಕ್ಕೆ ಸಾಕ್ಷಿಯಾಗಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಸಂಘಪರಿವಾರ ಕಾರ್ಯಕರ್ತರು ಮುಸ್ಲಿಮರ ಮೇಲೆ ದಾಳಿ ನಡೆಸಿ ಗಲಭೆಗೆ ಕಾರಣವಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ jantakareporter.com ಸಂಪೂರ್ಣ ವರದಿಯೊಂದನ್ನು ಪ್ರಕಟಿಸಿದೆ.

ಸುತ್ತಮುತ್ತಲ ಪ್ರದೇಶವನ್ನು ತ್ರಿವರ್ಣದ ಬಲೂನುಗಳೊಂದಿಗೆ ಸಿಂಗರಿಸಿದ್ದ ಸ್ಥಳೀಯ ಮುಸ್ಲಿಮರು ಧ್ವಜಸ್ಥಂಬವೊಂದನ್ನು ನಿರ್ಮಿಸಿ ಧ್ವಜಾರೋಹಣಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದರು. ಈ ಸಂದರ್ಭ ಮತ್ತೊಂದು ಕಡೆಯಿಂದ ಸಂಘಪರಿವಾರ ಕಾರ್ಯಕರ್ತರು ಆಗಮಿಸಿದ್ದಾರೆ. ಕೆಲ ಸಮಯದಲ್ಲೇ ದುಷ್ಕರ್ಮಿಗಳು ಮುಸ್ಲಿಮರು ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದ ಸ್ಥಳಕ್ಕೆ ನುಗ್ಗಿ ಕುರ್ಚಿಗಳನ್ನು ಎಸೆದು ಅಶಾಂತಿ ಸೃಷ್ಟಿಸಿದ್ದಾರೆ. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಂತರ ನಡೆದ ಕಾಸ್ಗಂಜ್ ಗಲಭೆ ವ್ಯಾಪಕವಾಗಿ ಹರಡಿ ಒಬ್ಬ ಯುವಕನ ಸಾವಿಗೂ ಕಾರಣವಾಗಿತ್ತು. ಇಡೀ ಘಟನೆಯ ಸೂತ್ರಧಾರಿಗಳು, ಕಾರಣಕರ್ತರು ಸಂಘಪರಿವಾರದ ಕಾರ್ಯಕರ್ತರೇ ಆಗಿದ್ದರೂ ‘ಆಜ್ ತಕ್’ ಚಾನೆಲ್ ನ ರೋಹಿತ್ ಸರ್ದಾನ ಹಾಗು ಶ್ವೇತಾ ಸಿಂಗ್ ಗಲಭೆಗೆ ಮುಸ್ಲಿಮರೇ ಕಾರಣ ಎನ್ನುವಂತೆ ಹಾಗು ಮುಸ್ಲಿಮರು ಭಾರತ ವಿರೋಧಿಗಳು ಎನ್ನುವಂತೆ ಬಿಂಬಿಸಿದರು. ಆದರೆ ಇವರ ಬಣ್ಣ ನಂತರ ಬಯಲಾಗಿತ್ತು.

ಇದೇ ಕಾಸ್ಗಂಜ್ ಗಲಭೆಗೆ ಸಂಬಂಧಿಸಿ ರಾಹುಲ್ ಉಪಾಧ್ಯಾಯ ಎನ್ನುವ ವ್ಯಕ್ತಿಯನ್ನೂ ಕೊಲೆಗೈಯಲಾಗಿದೆ. ಮುಸ್ಲಿಮರೇ ಆತನನ್ನು ಕೊಲೆಗೈದಿದ್ದಾರೆ ಎನ್ನುವ ಸುದ್ದಿಯನ್ನೂ ಹರಡಲಾಗಿತ್ತು. ಆದರೆ ನಂತರ ರಾಹುಲ್ ಮಾಧ್ಯಮದವರ ಮುಂದೆ ಬಂದು, “ನಾನು ಸತ್ತಿಲ್ಲ. ಕೋಮುದ್ವೇಷ ಹರಡಬೇಡಿ” ಎಂದು ವಿನಂತಿಸಿದ್ದರು.

ಇಷ್ಟೇ ಅಲ್ಲದೆ ಗಲಭೆಯಲ್ಲಿ ಮೃತಪಟ್ಟ ಯುವಕನ ತಂದೆ ತನಗೆ ಜೀವಬೆದರಿಕೆ ಇದೆ ಸುಳ್ಳು ಹೇಳಲು ಪತ್ರಕರ್ತನೊಬ್ಬ ಒತ್ತಾಯಿಸಿದ್ದ ಎಂದು ಕಾಸ್ಗಂಜ್ ಎಸ್ಪಿ ಪಿಯೂಷ್ ಶ್ರೀವಾಸ್ತವ ಹೇಳಿದ್ದರು.

ಕಾಸ್ಗಂಜ್ ಗಲಭೆಯ ಸಂದರ್ಭ ‘ವಂದೇ ಮಾತರಂ ಹೇಳಿದ್ದೇ ತಪ್ಪಾ, ಭಾರತದಲ್ಲಿ ತ್ರಿವರ್ಣ ಧ್ವಜ ಹಾರಿಸಬಾರದೇ” ಎಂದೆಲ್ಲಾ ಚರ್ಚೆ ನಡೆಸಿ ಈ ಘಟನೆಗೆ ಮುಸ್ಲಿಮರೇ ಕಾರಣ ಎಂದು ಮಾಧ್ಯಮಗಳು ಬಿಂಬಿಸಿದ್ದವು. ಇದೀಗ ಮುಸ್ಲಿಮರು ಗಣರಾಜ್ಯೋತ್ಸವ ಆಚರಿಸುತ್ತಿದ್ದ ಸಂದರ್ಭ ಅಡ್ಡಿಪಡಿಸಿದ, ಗಲಾಟೆ ಮಾಡಿದ, ಗಲಭೆಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ಇಂತಹ ಮಾಧ್ಯಮಗಳು ಬಾಯಿ ಬಿಡುತ್ತಿಲ್ಲ. ಅಂತೆ ಕಂತೆಗಳನ್ನು ಮುಂದಿಟ್ಟು ಸುದ್ದಿ ಮಾಡಿದವರು ಸತ್ಯಾಂಶವೇ ಕಣ್ಣ ಮುಂದಿರುವಾಗ ಗಣರಾಜ್ಯೋತ್ಸವ ಆಚರಿಸದಂತೆ ತಡೆದವರ ವಿರುದ್ಧ ಸುದ್ದಿ ಮಾಡುತ್ತಾರೆಯೇ ಎಂದು ಕಾದು ನೋಡಬೇಕಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News