ಆಧಾರ್ ಭದ್ರತೆ ಹ್ಯಾಕ್ ಮಾಡಿ ಸಬ್ಸಿಡಿ ಆಹಾರಧಾನ್ಯ ಕಳ್ಳತನ: ಇಬ್ಬರ ಬಂಧನ

Update: 2018-02-03 16:37 GMT

ಸೂರತ್, ಫೆ.3: ಹ್ಯಾಕ್ ಮಾಡಲ್ಪಟ್ಟ ಸಾಫ್ಟ್‌ವೇರ್ ಹಾಗೂ ಫಲಾನುಭವಿಗಳ ಅನಧಿಕೃತ ಬಯೋಮೆಟ್ರಿಕ್ ಆಧಾರ್ ದತ್ತಾಂಶವನ್ನು ಬಳಸಿ ಸಬ್ಸಿಡಿ ಹೊಂದಿರುವ ಆಹಾರಧಾನ್ಯವನ್ನು ಕಳ್ಳತನ ಮಾಡಿದ ಆರೋಪದಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಪೊಲೀಸರು ಎರಡು ರೇಶನ್ ಅಂಗಡಿಗಳ ಮಾಲಕರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬಾಬುಬಾಯಿ ಬೋರಿವಲ್ (53) ಹಾಗೂ ಸಂಪತ್‌ಲಾಲ್ ಶಾ (61) ಎಂದು ಗುರುತಿಸಲಾಗಿದ್ದು, ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ರಾಜ್ಯ ಸರಕಾರವು 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 2016ರ ಎಪ್ರಿಲ್‌ನಲ್ಲಿ ಅನ್ನಪೂರ್ಣ ಯೋಜನೆಗೆ ಚಾಲನೆ ನೀಡಿತ್ತು. ಈ ವೇಳೆ ನ್ಯಾಯ ಬೆಲೆ ಅಂಗಡಿಗಳನ್ನು ದೀನ್ ದಯಾಳ್ ಗ್ರಾಹಕ ಭಂಡಾರ ಎಂದು ಪುನರ್‌ನಾಮಕರಣ ಮಾಡಲಾಗಿದ್ದು ಕಂಪ್ಯೂಟರೀಕರಣಗೊಳಿಸುವ ಮೂಲಕ ಸಬ್ಸಿಡಿವುಳ್ಳ ಆಹಾರಧಾನ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಎಚ್ಚರವಹಿಸಲಾಗಿತ್ತು ಎಂದು ಕ್ರೈಂಬ್ರಾಂಚ್ ಪೊಲೀಸ್ ನಿರೀಕ್ಷಕರಾದ ಬಿ.ಎನ್ ದಾವೆ ತಿಳಿಸಿದ್ದಾರೆ.

ರೇಶನ್ ಅಂಗಡಿಗಳು ಇ-ಎಫ್‌ಪಿಎಸ್ ಎಂಬ ಕಂಪ್ಯೂಟರ್ ಅಪ್ಲಿಕೇಶನ್‌ಅನ್ನು ಬಳಸಬೇಕಾಗುತ್ತದೆ. ಈ ಆ್ಯಪ್‌ನಲ್ಲಿ ಫಲಾನುಭವಿಗಳ ದತ್ತಾಂಶಗಳನ್ನು ಶೇಖರಿಸಿಡಲಾಗಿರುತ್ತದೆ. ಫಲಾನುಭವಿಗಳ ವಿವರವನ್ನು ಪಡೆಯುವ ಸಲುವಾಗಿ ರೇಶನ್ ಅಂಗಡಿ ಮಾಲಕರಿಗೆ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ನೀಡಲಾಗುತ್ತದೆ. ಆಹಾರಧಾನ್ಯ ಪಡೆಯುವ ಸಲುವಾಗಿ ಫಲಾನುಭವಿಯು ತನ್ನ ಬೆರಳಚ್ಚು, ರೇಶನ್ ಕಾರ್ಡ್ ವಿವಿರ ಮತ್ತು ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಎಲ್ಲ ಪರಿಶೀಲನೆ ಮುಗಿದ ನಂತರ ಫಲಾನುಭವಿಗಳು ಒಂದು ಸ್ಲಿಪ್ ಪಡೆಯುತ್ತಾರೆ ಮತ್ತು ಅದರ ಆಧಾರದಲ್ಲಿ ಅವರಿಗೆ ಆಹಾರಧಾನ್ಯವನ್ನು ನೀಡಲಾಗುತ್ತದೆ ಎಂದು ದಾವೆ ವಿವರಿಸಿದ್ದಾರೆ.

ಆರೋಪಿಗಳು ನಕಲಿ ಸಾಫ್ಟ್‌ವೇರ್ ಬಳಸಿ ಅಪರಿಚಿತ ಮೂಲದಿಂದ ಫಲಾನುಭವಿಗಳ ದತ್ತಾಂಶಗಳಿಗೆ ಕನ್ನ ಹಾಕಿದ್ದಾರೆ. ಹೀಗೆ ಪಡೆದ ದತ್ತಾಂಶಗಳನ್ನು ತಮ್ಮ ಕಂಪ್ಯೂಟರ್‌ನಲ್ಲಿ ಉಳಿಸಿಕೊಂಡ ಅವರು, ಫಲಾನುಭವಿಗಳು ಸಬ್ಸಿಡಿವುಳ್ಳ ಆಹಾರಧಾನ್ಯವನ್ನು ಪಡೆದುಕೊಂಡಿದ್ದಾರೆ ಎಂದು ಸಾಬೀತುಮಾಡಲು ಪ್ರತೀ ತಿಂಗಳು ಈ ದಾಖಲೆಯನ್ನು ನೀಡುತ್ತಿದ್ದರು. ಆದರೆ ವಾಸ್ತವದಲ್ಲಿ ನಿಜವಾದ ಫಲಾನುಭವಿಗಳಿಗೆ ಆಹಾರಧಾನ್ಯ ಸಿಗುತ್ತಿರಲಿಲ್ಲ ಎಂದು ದಾವೆ ತಿಳಿಸಿದ್ದಾರೆ.

ಅಷ್ಟಕ್ಕೂ ಆರೋಪಿಗಳು ನಕಲಿ ಸಾಫ್ಟ್‌ವೇರ್ ಮತ್ತು ಬಯೋಮೆಟ್ರಿಕ್ ದತ್ತಾಂಶವನ್ನು ಪಡೆದಿದ್ದಾದರೂ ಎಲ್ಲಿಂದ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮೊದಲು, ಫಲಾನುಭವಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಎಂಟು ರೇಶನ್ ಅಂಗಡಿ ಮಾಲಕರ ಮೇಲೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ನಂತರ ಈ ಪ್ರಕರಣವನ್ನು ಕ್ರೈಂಬ್ರಾಂಚ್‌ಗೆ ಹಸ್ತಾಂತರಿಸಲಾಗಿತ್ತು.

ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 406, 409 (ನಂಬಿಕೆ ದ್ರೋಹ), 467, 468, 471 (ವಂಚನೆ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳು ಮತ್ತು ಅಗತ್ಯ ವಸ್ತುಗಳ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News