ಭಾರತಕ್ಕೆ ಗೆಲುವಿನ ಅಭಿಯಾನ ಮುಂದುವರಿಸುವ ಗುರಿ

Update: 2018-02-03 18:11 GMT

ಸೆಂಚೂರಿಯನ್,ಫೆ.3: ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ರವಿವಾರ ಇಲ್ಲಿ ನಡೆಯಲಿರುವ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗೆಲುವಿನ ಅಭಿಯಾನ ಮುಂದುವರಿಸಲು ಎದುರು ನೋಡುತ್ತಿದೆ.

  ಕಳೆದ ಪಂದ್ಯದಲ್ಲಿ ಸೋಲಿನಿಂದ ಆಘಾತಗೊಂಡಿರುವ ದಕ್ಷಿಣ ಆಫ್ರಿಕ ತಂಡದಲ್ಲಿ ಗಾಯಾಳುಗಳ ಸಮಸ್ಯೆ ಕಂಡು ಬಂದಿದೆ.ತಂಡದ ನಾಯಕ ಎಫ್ ಡು ಪ್ಲೆಸಿಸ್ ಗಾಯಾಳುಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್ ಅವರು ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಇದೀಗ ನಾಯಕ ಪ್ಲೆಸಿಸ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ತಂಡಕ್ಕೆ ಇನ್ನಷ್ಟು ಸಮಸ್ಯೆ ಉಂಟಾಗಿದೆ.

ಭಾರತ ಕಳೆದ ಪಂದ್ಯದಲ್ಲಿ ಆಫ್ರಿಕ ವಿರುದ್ಧ 6 ವಿಕೆಟ್‌ಗಳ ಗೆಲುವಿನೊಂದಿಗೆ 6 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಇದರೊಂದಿಗೆ ಆಫ್ರಿಕ ತಂಡದ 17 ಪಂದ್ಯಗಳ ಗೆಲುವಿನ ಅಜೇಯ ಓಟಕ್ಕೆ ತಡೆ ಬಿದ್ದಿದೆ. ಕಳೆದ ಫೆಬ್ರವರಿಯಲ್ಲಿ ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ಸೋಲು ಅನುಭವಿಸಿತ್ತು. ಆ ಬಳಿಕ ಗೆಲುವಿನ ಹಳಿಗೆ ಮರಳಿದ್ದ ದಕ್ಷಿಣ ಆಫ್ರಿಕ ಇದೇ ಮೊದಲ ಬಾರಿ ಸೋಲು ಅನುಭವಿಸಿದೆ.

  ಈ ಸೋಲಿನ ಬೆನ್ನಲ್ಲೇ ದಕ್ಷಿಣ ಆಫ್ರಿಕ ತಂಡದ ನಾಯಕ ಪ್ಲೆಸಿಸ್ ಕೈ ಬೆರಳಿಗೆ ಆಗಿರುವ ಗಾಯದಿಂದಾಗಿ ತಂಡದಿಂದ 6 ವಾರಗಳ ಕಾಲ ಹೊರಗುಳಿಯುವಂತಾಗಿದೆ. ಇದರಿಂದಾಗಿ ಪ್ಲೆಸಿಸ್ ಭಾರತ ವಿರುದ್ಧದ ಸರಣಿಯ ಉಳಿದ 5 ಏಕದಿನ ಮತ್ತು 3 ಪಂದ್ಯಗಳ ಟ್ವೆಂಟಿ-20 ಸರಣಿಗೆ ತಂಡದ ಸೇವೆಗೆ ಲಭ್ಯರಿಲ್ಲ.

 ಮೂರನೇ ಟೆಸ್ಟ್ ವೇಳೆ ಗಾಯಗೊಂಡಿದ್ದ ಡಿವಿಲಿಯರ್ಸ್‌ ಸರಣಿಯ ಮೂರು ಏಕದಿನ ಪಂದ್ಯಗಳಿಗೆ ಲಭ್ಯರಿಲ್ಲ. ಈ ಕಾರಣದಿಂದಾಗಿ ಆಫ್ರಿಕ ತಂಡಕ್ಕೆ ಹಿನ್ನ್ನಡೆಯಾಗಿದೆ. ಬ್ಯಾಟ್ಸ್ ಮನ್ ಫರ್ಹಾನ್ ಬೆಹಾರ್ದಿನ್ ಅವರನ್ನು ಪ್ಲೆಸಿಸ್‌ರಿಂದ ತೆರವಾಗಿರುವ ಜಾಗಕ್ಕೆ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ವಿಕೆಟ್ ಕೀಪರ್ ಹೆನ್ರಿಕ್ ಕ್ಲಾಸೆನ್ ಅವರು ದಕ್ಷಿಣ ಆಫ್ರಿಕದ ದೇಶೀಯ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ 3ನೇ ಆಟಗಾರ. ಇವರನ್ನು ಕ್ವಿಂಟನ್ ಡಿ ಕಾಕ್ ಬದಲಿಯಾಗಿ ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು. ಡಿ ಕಾಕ್ ಅವರು 49 ಎಸೆತಗಳಲ್ಲಿ 34 ರನ್ ಗಳಿಸಿದ್ದರು. ಫಾರ್ಮ್ ಕಳೆದುಕೊಂಡಿರುವ ಡಿ ಕಾಕ್ ಅವರಿಗೆ ಮುಂದಿನ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಇಲ್ಲ. ಕ್ಲಾಸೆನ್ ಅವಕಾಶ ಪಡೆಯುವುದು ಬಹುತೇಕ ಖಚಿತವಾಗಿದೆ.

   ಮೂರನೇ ಟೆಸ್ಟ್‌ನಲ್ಲಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ ಇದೇ ಫಾರ್ಮ್‌ನ್ನು ಮುಂದುವರಿಸಿ ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸಿತ್ತು. ಕಿಂಗ್ಸ್‌ಮೇಡ್‌ನಲ್ಲಿ ಗೆಲುವಿನ ಖಾತೆ ತೆರೆದಿತ್ತು. ಸೆಂಚೂರಿಯನ್‌ನಲ್ಲಿ ಭಾರತ ವಿವಿಧ ತಂಡಗಳ ವಿರುದ್ಧ 11 ಏಕದಿನ ಪಂದ್ಯಗಳಲ್ಲಿ ಆಡಿತ್ತು. 4 ಪಂದ್ಯಗಳಲ್ಲಿ ಜಯ ಹಾಗೂ 5 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. 2003ರಲ್ಲಿ ಪಾಕಿಸ್ತಾನ ವಿರುದ್ಧ ವಿಶ್ವಕಪ್‌ನಲ್ಲಿ ಜಯ ಗಳಿಸಿತ್ತು.

ದಕ್ಷಿಣ ಆಫ್ರಿಕ ವಿರುದ್ಧ 5 ಪಂದ್ಯಗಳಲ್ಲಿ ಭಾರತ ಆಡಿತ್ತು. 2 ಪಂದ್ಯಗಳಲ್ಲಿ ಜಯ ಗಳಿಸಿತ್ತು. 1ರಲ್ಲಿ ಸೋಲು ಅನುಭವಿಸಿತ್ತು. 2001-02ರಲ್ಲಿ ಆಫ್ರಿಕ ವಿರುದ್ಧ ತ್ರಿಕೋನ ಸರಣಿಯಲ್ಲಿ ಕೊನೆಯ ಬಾರಿ ಆಡಿತ್ತು. 2006-07 ಮತ್ತು 2010-11 ಪ್ರವಾಸ ಸರಣಿುಲ್ಲಿ ಭಾರತ ಸೋಲು ಅನುಭವಿಸಿತ್ತು.

ಭಾರತ

ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಎಂ.ಎಸ್.ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಾಲ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಜಸ್‌ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ, ಶಾರ್ದುಲ್ ಠಾಕೂರ್.

ದಕ್ಷಿಣ ಆಫ್ರಿಕ

ಏಡೆನ್ ಮರ್ಕರಮ್(ಹಂಗಾಮಿ ನಾಯಕ), ಹಾಶಿಮ್ ಅಮ್ಲ, ಕ್ವಿಂಟನ್ ಡಿಕಾಕ್(ವಿಕೆಟ್ ಕೀಪರ್), ಜೆ.ಪಿ.ಡುಮಿನಿ, ಇಮ್ರಾನ್ ತಾಹಿರ್, ಡೇವಿಡ್ ಮಿಲ್ಲರ್, ಮೊರ್ನೆ ಮೊರ್ಕೆಲ್, ಕ್ರಿಸ್ ಮೋರಿಸ್, ಲುಂಗಿಸಾನಿ ಗಿಡಿ, ಆ್ಯಂಡ್ಲೆ ಫೆಹ್ಲುಕ್ವಾಯೊ, ಕಾಗಿಸೊ ರಬಾಡ, ತಾಬ್ರೈದ್ ಶಂಸಿ, ಹೆನ್ರಿಕ್ ಕ್ಲಾಸೆನ್, ಖಯೆಲಿಹಿಲ್ಲೆ ರೊಂಡೊ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News