ಜಮ್ಮು : ಮತ್ತೆ ಪಾಕ್ ಗುಂಡಿನ ದಾಳಿ ; ಸೇನಾಧಿಕಾರಿ ಸೇರಿ ನಾಲ್ವರು ಯೋಧರು ಹುತಾತ್ಮ

Update: 2018-02-04 17:45 GMT

 ಶ್ರೀನಗರ, ಫೆ.4: ಗಡಿಭಾಗದಲ್ಲಿ ಪಾಕ್ ಪಡೆ ಮತ್ತೊಮ್ಮೆ ಕದನವಿರಾಮ ಉಲ್ಲಂಘಿಸಿದ್ದು ಜಮ್ಮು ಕಾಶ್ಮೀರದ ರಜೌರಿ ಕ್ಷೇತ್ರದಲ್ಲಿ ನಡೆಸಿದ ಭಾರೀ ಗುಂಡಿನ ದಾಳಿಯಲ್ಲಿ ಸೇನಾಧಿಕಾರಿ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

  ಜಮ್ಮು ಕಾಶ್ಮೀರದ ರಜೌರಿ ಕ್ಷೇತ್ರದ ತಾರ್ಕುಂಡಿ ಹಾಗೂ ಸುಂದರ್‌ಬನಿ ಪ್ರದೇಶದಲ್ಲಿ ಗಡಿನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನದ ಪಡೆಗಳು ಗುಂಡಿನ ದಾಳಿ ನಡೆಸಿದಾಗ ಸೇನೆಯ ಕ್ಯಾಪ್ಟನ್ ಕಪಿಲ್ ಕುಂಡು, ರೈಫಲ್‌ಮ್ಯಾನ್‌ಗಳಾದ ರಾಮ್ ಅವತಾರ್ ಹಾಗೂ ಶುಭಂ ಸಿಂಗ್ ಮತ್ತು ಹವೀಲ್ದಾರ್ ರೋಶನ್ ಲಾಲ್ ಮೃತಪಟ್ಟಿದ್ದು, ಬಿಎಸ್‌ಎಫ್ ಸಬ್‌ಇನ್‌ಸ್ಪೆಕ್ಟರ್ ಇಕ್ಬಾಲ್ ಅಹ್ಮದ್ ಗಾಯಗೊಂಡಿದ್ದಾರೆ ಎಂದು ರಜೌರಿ ಜಿಲ್ಲಾಧಿಕಾರಿ ಶಾಹಿದ್ ಇಕ್ಬಾಲ್ ಚೌಧರಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

  ರಜೌರಿ ಜಿಲ್ಲೆಯ ಭಿಂಬೇರ್ ಗಲಿ ವಿಭಾಗದಲ್ಲಿ ರವಿವಾರ ಸಂಜೆ ಪಾಕ್ ಪಡೆಗಳು ಅಪ್ರಚೋದಿತವಾಗಿ ಭಾರೀ ಗುಂಡಿನ ದಾಳಿ ನಡೆಸಿದಾಗ ಭಾರತೀಯ ಪಡೆಗಳು ಸೂಕ್ತ ಪ್ರತ್ಯುತ್ತರ ನೀಡಿವೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಯೋಧರ ಬಲಿದಾನವನ್ನು ವ್ಯರ್ಥವಾಗಿಸಲು ಬಿಡುವುದಿಲ್ಲ. ಪಾಕ್ ನಡೆಸಿದ ಅಪ್ರಚೋದಿತ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಲಾಗುವುದು ಎಂದು ಸೇನೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸುಂದರ್‌ಬನಿಯಿಂದ ಮಂಜಕೋಟೆವರೆಗಿನ ಪ್ರದೇಶದಲ್ಲಿರುವ 84 ಶಾಲೆಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಈ ಪ್ರದೇಶದಲ್ಲಿ ಗುಂಡಿನ ಚಕಮಕಿ ಮುಂದುವರಿದಿದ್ದು ಪರಿಸ್ಥಿತಿ ಉದ್ವಿಗ್ನವಾಗಿದೆ .ಪಾಕಿಸ್ತಾನ ಗಡಿ ಕ್ರಿಯಾ ತಂಡ(ಬ್ಯಾಟ್) ಈ ಆಕ್ರಮಣ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ರವಿವಾರ ಪಾಕ್ ಪಡೆಗಳು ಪೂಂಛ್ ಮತ್ತು ರಜೌರಿ ಜಿಲ್ಲೆಗಳ ಗಡಿನಿಯಂತ್ರಣಾ ರೇಖೆಯ ಬಳಿ ಇರುವ ಭಾರತದ ಸೇನಾನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಗುಂಡಿನ ದಾಳಿಯಲ್ಲಿ 15ರ ಹರೆಯದ ಹುಡುಗಿಯೊಬ್ಬಳು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಈ ವರ್ಷದ ಜನವರಿ 18ರಿಂದ 22ರವರೆಗೆ ಜಮ್ಮು ಕಾಶ್ಮೀರದ ಗಡಿಭಾಗದಲ್ಲಿ ಪಾಕ್ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 8 ನಾಗರಿಕರು ಸೇರಿ 14 ಮಂದಿ ಮೃತಪಟ್ಟಿದ್ದು 70 ಮಂದಿ ಗಾಯಗೊಂಡಿದ್ದಾರೆ. ಜನವರಿ 22ರ ಬಳಿಕ ಅಂತರಾಷ್ಟ್ರೀಯ ಗಡಿಭಾಗದಲ್ಲಿ ಪಾಕ್ ಪಡೆಗಳು ಕದನವಿರಾಮ ಉಲ್ಲಂಘಿಸಿದ ಪ್ರಕರಣ ವರದಿಯಾಗಿಲ್ಲ. ಆದರೆ ಗಡಿ ನಿಯಂತ್ರಣಾ ರೇಖೆಯ ಬಳಿ ಆಗಿಂದಾಗ್ಗೆ ಗುಂಡಿನ ದಾಳಿ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News