ಎನ್‌ಡಿಎ ಜತೆಗಿನ ಮೈತ್ರಿ ಮುಂದುವರಿಕೆ: ಟಿಡಿಪಿ

Update: 2018-02-04 16:27 GMT

  ಹೊಸದಿಲ್ಲಿ, ಫೆ.4: ಎನ್‌ಡಿಎ ಜತೆಗಿನ ಮೈತ್ರಿಯನ್ನು ಈಗಲೇ ಕಡಿದುಕೊಳ್ಳದಿರಲು ನಿರ್ಧರಿಸಿರುವ ತೆಲುಗುದೇಶಂ(ಟಿಡಿಪಿ) ಪಕ್ಷ, ಆಂಧ್ರಪ್ರದೇಶಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದೆ.

  ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಅಮರಾವತಿಯ ನಿವಾಸದಲ್ಲಿ ನಡೆದ ಟಿಡಿಪಿ ಸಂಸದೀಯ ಪಕ್ಷದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಟಿಡಿಪಿ ಮುಖಂಡ, ಕೇಂದ್ರ ಸಚಿವ ವೈ.ಎಸ್.ಚೌಧರಿ ತಿಳಿಸಿದ್ದಾರೆ.

ರಾಜ್ಯಕ್ಕೆ ಸಂಬಂಧಿಸಿದ ಹಲವಾರು ವಿಷಯಗಳು ಕೇಂದ್ರ ಸರಕಾರದಲ್ಲಿ ಇತ್ಯರ್ಥಕ್ಕೆ ಬಾಕಿಯಿದೆ. ಇವು ಪರಿಹಾರಗೊಳ್ಳಲು ಮೊದಲು ಪ್ರಯತ್ನಿಸಬೇಕಿದೆ. ಆಗಲೂ ಕೇಂದ್ರ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರೆ, ಎನ್‌ಡಿಎ ಮೈತ್ರಿ ಮುಂದುವರಿಸುವ ಕುರಿತು ಪಕ್ಷದ ಅಧ್ಯಕ್ಷರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ . ಅದುವರೆಗೆ ನಾವು ಕಾದುನೋಡಲಿದ್ದೇವೆ ಎಂದು ಚೌಧರಿ ಹೇಳಿದರು.

   ಕೇಂದ್ರ ಸರಕಾರ ಫೆ.1ರಂದು ಮಂಡಿಸಿದ ಬಜೆಟ್‌ನಲ್ಲಿ ಆಂಧ್ರಪ್ರದೇಶವನ್ನು ನಿರ್ಲಕ್ಷಿಸಲಾಗಿದೆ ಎಂದು ಬಿಜೆಪಿಯ ದಕ್ಷಿಣ ಭಾರತದ ಪ್ರಮುಖ ಮಿತ್ರಪಕ್ಷವಾಗಿರುವ, 16 ಸದಸ್ಯರನ್ನು ಒಳಗೊಂಡಿರುವ ಟಿಡಿಪಿ ಅಸಮಾಧಾನಗೊಂಡಿದೆ. ನಿಮ್ಮನ್ನು ಸಂಸತ್‌ನಿಂದ ಅಮಾನತು ಮಾಡಿದರೂ ತೊಂದರೆಯಿಲ್ಲ, ಸಂಸತ್ತಿನಲ್ಲಿ ತೀವ್ರ ರೀತಿಯಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಬೇಕು ಎಂದು ಚಂದ್ರಬಾಬು ನಾಯ್ಡು ಟಿಡಿಪಿ ಸಂಸದರಿಗೆ ಸೂಚಿಸಿರುವುದಾಗಿ ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News