ಪೊಲೀಸರು ಸತ್ಯಾಂಶ ತಿರುಚುತ್ತಿದ್ದಾರೆ ಎಂದ ವಿದ್ಯಾರ್ಥಿಗಳು
ಮಹೇಂದ್ರಗಢ,ಫೆ.4: ಇಲ್ಲಿ ಜಮ್ಮು-ಕಾಶ್ಮೀರದ ಇಬ್ಬರು ವಿದ್ಯಾರ್ಥಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಮರುದಿನ ಹೇಳಿಕೆಯೊಂದನ್ನು ನೀಡಿರುವ ಪೊಲೀಸರು, ಅದೇ ದಿನ ಆರು ಆರೋಪಿಗಳು ಶುಕ್ರವಾರದ ನಮಾಝ್ ಮುಗಿಸಿಕೊಂಡು ಮಸೀದಿಯಿಂದ ಹೊರಗೆ ಬರುತ್ತಿದ್ದ ಐವರು ಮುಸ್ಲಿಂ ವ್ಯಕ್ತಿಗಳ ಮೇಲೂ ಹಲ್ಲೆ ನಡೆಸಿದ್ದರು ಎಂದು ತಿಳಿಸಿದ್ದಾರೆ.
ಮುಸ್ಲಿಂ ವ್ಯಕ್ತಿಗಳು ದಾಳಿಕೋರರ ಅಸಲಿ ಗುರಿಯಾಗಿದ್ದರು ಮತ್ತು ಅವರ ಮೇಲೆ ದಾಳಿ ನಡೆಯವಾಗ ವಿದ್ಯಾರ್ಥಿಗಳು ಅಲ್ಲಿದ್ದರು. ಹೀಗಾಗಿ ಅವರೂ ಕಾರ್ಮಿಕರ ಗುಂಪಿಗೆ ಸೇರಿದವರೆಂಬ ತಪ್ಪುಗ್ರಹಿಕೆಯಿಂದ ಅವರ ಮೇಲೆ ಹಲ್ಲೆ ನಡೆದಿತ್ತು ಎಂದು ಮಹೇಂದ್ರಗಢ ಎಸ್‌ಪಿ ಕಮಲದೀಪ್ ತಿಳಿಸಿದರು.
ಶನಿವಾರ ಪೊಲೀಸರು ಇಲ್ಲಿಯ ಸೆಂಟ್ರಲ್ ವಿವಿಯ ವಿದ್ಯಾರ್ಥಿಗಳಾದ ಅಫ್ತಾಬ್ ಅಹ್ಮದ್ ಮತ್ತು ಅಮ್ಜದ್ ಅಲಿ ಅವರ ಮೇಲೆ ಹಲ್ಲೆಗಾಗಿ ಮತ್ತು ಉತ್ತರ ಪ್ರದೇಶದ ಮುಝಫ್ಫರನಗರ ಹಾಗೂ ಶಾಮ್ಲಿ ಜಿಲ್ಲೆಗಳಿಗೆ ಸೇರಿದ ಐವರು ಮುಸ್ಲಿಂ ಕಾರ್ಮಿಕರ ಮೆಲೆ ಹಲ್ಲೆಗಾಗಿ ಆರು ಆರೋಪಿಗಳ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದರು. ಆರೋಪಿಗಳ ಪೈಕಿ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ.
ಆರೋಪಿಗಳು ಶುಕ್ರವಾರ ಮೂರು ವಿಭಿನ್ನ ಸ್ಥಳಗಳಲ್ಲಿ ಹೊಡೆದಾಟಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದ ಕಮಲದೀಪ್, ಅವರೆಲ್ಲ ನೆರೆಯ ಗ್ರಾಮಗಳ ನಿವಾಸಿಗಳಾಗಿದ್ದಾರೆ. ಅವರ ಪೈಕಿ ಓರ್ವ ಸ್ಥಳೀಯ ಕಾಲೇಜೊಂದರಲ್ಲಿ ಬಿಎಸ್ಸಿ ವಿದ್ಯಾರ್ಥಿಯಾಗಿದ್ದರೆ, 20ರ ಹರೆಯದ ಇಬ್ಬರು ಸ್ವ ಉದ್ಯೋಗಿಗಳಾಗಿದ್ದಾರೆ ಎಂದರು.
ಆದರೆ ಪೊಲೀಸರು ಸತ್ಯಾಂಶಗಳನ್ನು ತಿರುಚುತ್ತಿದ್ದಾರೆ ಮತ್ತು ಎರಡೂ ಘಟನೆಗಳಿಗೆ ಸಂಬಂಧವಿರಲಿಲ್ಲ ಎಂದು ಕಾಶ್ಮೀರಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಮುಸ್ಲಿಂ ಕಾರ್ಮಿಕರ ಮೇಲಿನ ಹಲ್ಲೆಯನ್ನು ತಾವು ನೋಡಿರಲಿಲ್ಲ ಮತ್ತು ಪೊಲೀಸರು ಹೇಳುವಂತೆ ತಾವು ಆ ಸ್ಥಳದಲ್ಲಿ ಇರಲೂ ಇಲ್ಲ. ಆ ಘಟನೆಗೂ ತಮಗೂ ಸಂಬಂಧವಿಲ್ಲ ಎಂದು ಅವರು ಹೇಳಿದರು. ವಿದ್ಯಾರ್ಥಿಗಳ ಹೇಳಿಕೆಯನ್ನು ಹಲ್ಲೆಗೊಳಗಾದ ಕಾರ್ಮಿಕರು ಸಮರ್ಥಿಸಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆದಾಗ ಪೊಲೀಸರು ಹೇಳುವಂತೆ ಅಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿರಲಿಲ್ಲ .ಇವೆರಡೂ ಪ್ರತ್ಯೇಕ ಘಟನೆಗಳಾಗಿವೆ ಎಂದು ಹಲ್ಲೆಗೊಳಗಾಗಿದ್ದವರ ಪೈಕಿ ಸಾದಿಕ್ ತಿಳಿಸಿದರು.
ಘಟನೆಯ ಬಗ್ಗೆ ವಿವರವಾದ ತನಿಖೆಯನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಗರಿಮಾ ಮಿತ್ತಲ್ ಅವರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.