ಬಂಗ್ಲಗುಡ್ಡೆ ಪರಿಸರದಲ್ಲಿ 24 ಗಂಟೆಯೊಳಗೆ ಎರಡನೆ ಕಳ್ಳತನ

Update: 2018-02-05 07:28 GMT

ಕಾರ್ಕಳ, ಫೆ. 5: ಬಂಗ್ಲೆಗುಡ್ಡೆ ಜಂಕ್ಷನ್ ಬಳಿ‌ ರವಿವಾರ ಕಳ್ಳತನ ಮಾಡಿ ನಗ-ನಗದು ದೋಚಿದ 24 ತಾಸು ಒಳಗಡೆ ಇದೇ ಪರಿಸರದಲ್ಲಿ ‌ಇನ್ನೊಂದು ಕಳ್ಳತನ ಪ್ರಕರಣ ನಡೆದ ಬಗ್ಗೆ ವರದಿಯಾಗಿದೆ.

ಘಟನೆ ವಿವರ

ಕಾರ್ಕಳ ಕಸಬಾ ಗ್ರಾಮದ ಬಂಗ್ಲಗುಡ್ಡೆ‌ ಜಂಕ್ಷನ್ ಬಳಿ ರವಿವಾರ ಬೆಳಗ್ಗಿನ ಜಾವ ಇಲ್ಲಿನ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ದಂಪತಿಗೆ ಹಲ್ಲೆ ಮಾಡಿ, 21 ಪವನ್ ಚಿನ್ನ ಹಾಗೂ 2.50 ಲಕ್ಷ ರೂ. ದೋಚಿದ ಬೆನ್ನಲ್ಲೇ ಮತ್ತೊಂದು ಪ್ರಕರಣ ನಡೆದಿದೆ.

ಬಂಗ್ಲಗುಡ್ಡೆಯ ಜಯಂತಿ ಶೆಟ್ಟಿ ಎಂಬವರ ಮನೆಗೆ ನುಗ್ಗಿದ ಕಳ್ಳರು ಮನೆಯ ಹಾಲ್, ಎರಡು ಕಡೆ ಕೋಣೆಯಲ್ಲಿನ ಕಪಾಟು ಒಡೆದು, ಚಿನ್ನಾಭರಣಕ್ಕಾಗಿ ಜಾಲಾಡಿ ಏನು ಸಿಗದ ಕಾರಣ ಪೂಜೆಯ ಬೆಳ್ಳಿ ತಟ್ಟಿಯನ್ನು ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ದುಷ್ಕರ್ಮಿಗಳು ಮನೆಗೆ ನುಗ್ಗಿದ ಸಂದರ್ಭ‌ ಮನೆಯಲ್ಲಿ ಯಾರೂ ಇರಲಿಲ್ಲ, ಮನೆಯ ಒಡೆತಿ ಜಯಂತಿ ಶೆಟ್ಟಿ ಕಳೆದ ಹಲವು ತಿಂಗಳುಗಳಿಂದ ಬೆಂಗಳೂರಿನಲ್ಲಿರುವ ತನ್ನ ಪುತ್ರನ ಮನೆಯಲ್ಲಿ ವಾಸವಾಗಿದ್ದಾರೆ.

ಕಳ್ಳತನ‌ ನಡೆದ ಮನೆಯ ಮುಂಭಾಗದಲ್ಲಿ ತನ್ನ ಮತ್ತೋರ್ವ ಪುತ್ರನ ಮನೆ ಇದ್ದು, ಕಳೆದ 15 ದಿನದ ಹಿಂದೆ ಹೊಸ ಮನೆ ನಿರ್ಮಾಣಕ್ಕಾಗಿ ಹಳೆಯ ಮನೆಯನ್ನು ಕೆಡವಿದ್ದು, ಅವರು ಬೇರೆ ಕಡೆ ವಾಸವಾಗಿದ್ದಾರೆ. ಈ ಬಗ್ಗೆ ಮಾಹಿತಿ ಅರಿತ ದುಷ್ಕರ್ಮಿಗಳು ಜಯಂತಿ ಶೆಟ್ಟಿ ಅವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಎಂದಿನಂತೆ ಅವರ ಹಿರಿಯ ಮಗ ಶಿವಾನಂದ ಶೆಟ್ಟಿ‌ ಇಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ಮನೆಗೆ ದ್ವೀಪ ಇಡಲು ತೆರಳಿದ ಸಂದರ್ಭ ಈ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಕಳ್ಳತನ ಪ್ರಕರಣಗಳಲ್ಲೂ ಬಾಗಿಲನ್ನು ಒಡೆಯಲು ಉಪಯೋಗಿಸಿದ್ದ ಕಬ್ಬಿಣದ ಉಳಿಯನ್ನು ಒಟ್ಟು ಹೋಗಿರುವುದು ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News