ಜೀವನ ದೊಡ್ಡದಾಗಿರಬೇಕು, ದೀರ್ಘವಲ್ಲ: ಪಾಕ್ ದಾಳಿಯಲ್ಲಿ ಹುತಾತ್ಮರಾದ ಕ್ಯಾ.ಕಪಿಲ್ ರ ಫೇಸ್ಬುಕ್ ಬರಹ

Update: 2018-02-05 14:19 GMT

ಹೊಸದಿಲ್ಲಿ, ಫೆ.5: ಇನ್ನು ಆರು ದಿನಗಳು ಕಳೆದಿದ್ದರೆ ಅವರು ತಮ್ಮ 23ನೇ ಹುಟ್ಟುಹಬ್ಬವನ್ನು ಆಚರಿಸುವವರಿದ್ದರು. ಆದರೆ ಪಾಕಿಸ್ತಾನಿ ಶೆಲ್ಲಿಂಗ್ ದಾಳಿಗೆ ಬಲಿಯಾಗುವ ಮೂಲಕ ಅವರು ವೀರ ಮರಣವನ್ನು ಪಡೆದರು.

ಇದು ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನದ ದಾಳಿಯಿಂದ ಹುತಾತ್ಮರಾದ ನಾಲ್ಕು ಭಾರತೀಯ ಯೋಧರಲ್ಲಿ ಒಬ್ಬರಾಗಿದ್ದ ಕ್ಯಾಪ್ಟನ್ ಕಪಿಲ್ ಕುಂಡು ಅವರ ಕತೆ. “ಜೀವನ ದೊಡ್ಡದಾಗಿರಬೇಕು, ದೀರ್ಘವಲ್ಲ” ಎಂಬ ಅವರ ಫೇಸ್‌ಬುಕ್ ಬರಹವೇ ಅವರು ವೀರತ್ವಕ್ಕೆ ಹಿಡಿದ ಕನ್ನಡಿಯಾಗಿದೆ.

ಕಪಿಲ್ ಕುಂಡು ಅವರ ಜೊತೆಗೆ 28ರ ಹರೆಯದ ರೈಫಲ್‌ಮ್ಯಾನ್ ರಾಮ ಅವತಾರ್, 22 ವರ್ಷ ಪ್ರಾಯದ ಶುಭಮ್ ಸಿಂಗ್ ಮತ್ತು 42 ವಯಸ್ಸಿನ ಹವಲ್ದಾರ್ ರೋಶನ್ ಸಿಂಗ್ ಕೂಡಾ ಹುತಾತ್ಮರಾದರು. ಪಾಕಿಸ್ತಾನಿ ಸೇನೆಯು ಹಾರಿಸಿದ ಐದರಿಂದ ಆರು ಟ್ಯಾಂಕ್ ನಿಗ್ರಹ ಕ್ಷಿಪಣಿಯಲ್ಲಿ ಕನಿಷ್ಟ ಒಂದು ಕ್ಷಿಪಣಿ ಭಾರತೀಯರಿದ್ದ ಬಂಕರ್‌ಗೆ ಅಪ್ಪಳಿಸಿದ ಪರಿಣಾಮ ಅದರಲ್ಲಿದ್ದ ಯೋಧರು ಸಾವನ್ನಪ್ಪಿದರು.

ಫೆಬ್ರವರಿ ಹತ್ತು ಕಪಿಲ್ ಕುಂಡು ಅವರ 23ನೇ ಜನ್ಮದಿನವಾಗಿತ್ತು. ಆ ದಿನವನ್ನು ಹರ್ಯಾಣದ ಪಟೌಡಿಯಲ್ಲಿ ವಾಸಿಸುವ ತಮ್ಮ ತಾಯಿ ಮತ್ತು ಸಹೋದರಿಯ ಜೊತೆಗೆ ಆಚರಿಸುವ ಸಲುವಾಗಿ ಕುಂಡು ರಜೆ ಪಡೆದುಕೊಂಡಿದ್ದು, ಟಿಕೆಟ್ ಕೂಡಾ ಖರೀದಿಸಿದ್ದರು. ಕೆಲವೇ ಸಮಯದ ಹಿಂದೆ ಅವರು ತಮ್ಮ ಗ್ರಾಮಕ್ಕೆ ಮರಳಿದ್ದಾಗ ಗ್ರಾಮಸ್ಥರು ಅವರನ್ನು ತಮ್ಮ ನಾಯಕ ಎಂದು ಕರೆದು ಮೆರವಣಿಗೆ ಮಾಡಿದ್ದರು. ಕುಂಡು ಅವರಿಗೆ ಕವಿತೆಗಳನ್ನು ಬರೆಯುವ ಹವ್ಯಾಸವಿತ್ತು. ‘ಓರ್ವ ಹುತಾತ್ಮ ಸೈನಿಕನ ಕತೆ’ ಎಂಬ ಕವಿತೆಯನ್ನು ಅವರು ಬರೆದಿದ್ದಾರೆ. ತಮ್ಮ ಫೇಸ್‌ಬುಕ್‌ನಲ್ಲಿ ಅನೇಕ ಸ್ಫೂರ್ತಿದಾಯಕ ಸಾಲುಗಳನ್ನು ಹಂಚಿಕೊಂಡಿರುವ ಕುಂಡು ಅವರು, “ನಿನಗೆ ಓಡಲಾಗದಿದ್ದರೆ ನಡೆ, ನಡೆಯಲಾಗದಿದ್ದರೆ ತೆವಳು. ಆದರೆ ನಿನ್ನ ಗುರಿಯನ್ನು ಮುಟ್ಟುವವರೆಗೆ ನಿಲ್ಲಬೇಡ ಎಂಬ ಸಾಲುಗಳು ನನಗೆ ಅತ್ಯಂತ ಅಚ್ಚುಮೆಚ್ಚು” ಎಂದು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News