280.70 ಕೋ.ರೂ.ವಂಚನೆ: ಬಿಲಿಯಾಧೀಶ ನಿರವ್ ಮೋದಿ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ,ಫೆ.5: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ಗೆ 280.70 ಕೋ.ರೂ.ಗಳನ್ನು ವಂಚಿಸಿರುವ ಆರೋಪದಲ್ಲಿ ಬಿಲಿಯಾಧೀಶ, ವಜ್ರ ವ್ಯಾಪಾರಿ ನಿರವ್ ಮೋದಿ, ಅವರ ಸೋದರ ನಿಶಾಲ್, ಪತ್ನಿ ಅಮಿ ಮತ್ತು ಉದ್ಯಮ ಪಾಲುದಾರ ಮೇಹುಲ್ ಚಿನುಭಾಯಿ ಚೋಸ್ಕಿ ಅವರ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಡೈಮನ್ ಆರ್ ಯುಎಸ್, ಸೋಲಾರ್ ಎಕ್ಸ್‌ಪೋರ್ಟ್ಸ್ ಮತ್ತು ಸ್ಟೆಲ್ಲಾರ್ ಡೈಮಂಡ್ಸ್‌ನ ಪಾಲುದಾರರಾಗಿರುವ ಆರೋಪಿಗಳು ಬ್ಯಾಂಕಿನ ಅಧಿಕಾರಿಗಳೊಂದಿಗೆ ಶಾಮೀಲಾಗಿ 2017ನೇ ಸಾಲಿನಲ್ಲಿ ತನಗೆ 280.70 ಕೋ.ರೂ.ಗಳನ್ನು ವಂಚಿಸಿದ್ದಾರೆ ಎಂದು ಪಿಎನ್‌ಬಿ ದೂರಿನಲ್ಲಿ ಆರೋಪಿಸಿದೆ.
ಆಪಾದಿತ ಕಂಪನಿಗಳು ಆಮದು ವ್ಯವಹಾರಕ್ಕೆ ಸಾಲವನ್ನು ಕೋರಿದ್ದು, ಪಿಎನ್‌ಬಿಯ ಡೆಪ್ಯೂಟಿ ಮ್ಯಾನೇಜರ್(ಈಗ ನಿವೃತ್ತ) ಗೋಕುಲನಾಥ ಶೆಟ್ಟಿ ಮತ್ತು ಮನೋಜ್ ಖಾರತ್ ಅವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಆರೋಪಿಗಳೊಂದಿಗೆ ಶಾಮೀಲಾಗಿದ್ದರು ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಆರೋಪಿಸಿದೆ.
ತನ್ನ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿ ಆರೋಪಿ ಸಂಸ್ಥೆಗಳ ಪರವಾಗಿ 4.42 ಕೋ.ಡಾ.(280.70 ಕೋ.ರೂ.) ಮೊತ್ತದ ಎಂಟು ಲೆಟರ್ ಆಫ್ ಅಂಡರ್‌ಟೇಕಿಂಗ್‌ಗಳನ್ನು ಹಾಂಗ್‌ಕಾಂಗ್‌ನ ಅಲಹಾಬಾದ್ ಬ್ಯಾಂಕ್ ಮತ್ತು ಆ್ಯಕ್ಸಿಸ್ ಬ್ಯಾಂಕ್‌ಗಳಿಗೆ ನೀಡಿದ್ದರೆಂದು ಪಿಎನ್‌ಬಿ ದೂರಿನಲ್ಲಿ ತಿಳಿಸಿದೆ.