ಸ್ವಘೋಷಿತ ದೇವಮಾನವ ದೀಕ್ಷಿತ್ ವಿರುದ್ಧ ಲುಕ್‌ಔಟ್ ನೋಟಿಸ್
ಹೊಸದಿಲ್ಲಿ, ಫೆ.5: ರೋಹಿಣಿ ಆಶ್ರಮದಲ್ಲಿ ಯುವತಿಯರು ಹಾಗೂ ಮಹಿಳೆಯರನ್ನು ಅಕ್ರಮವಾಗಿ ಕೂಡಿ ಹಾಕಿದ್ದ ಆರೋಪ ಎದುರಿಸುತ್ತಿರುವ ಆಶ್ರಮದ ಸಂಸ್ಥಾಪಕ ವೀರೇಂದರ್ ದೇವ್ ದೀಕ್ಷಿತ್ ವಿರುದ್ಧ ‘ಲುಕ್‌ಔಟ್ ಸರ್ಕ್ಯುಲರ್(ಎಲ್‌ಒಸಿ)’ ಜಾರಿಗೊಳಿಸಲಾಗಿದೆ ಎಂದು ಸಿಬಿಐ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದೆ. ಆಶ್ರಮದಲ್ಲಿ ಯುವತಿಯರು ಹಾಗೂ ಮಹಿಳೆಯರನ್ನು ಅಕ್ರಮವಾಗಿ ಕೂಡಿಹಾಕಲಾಗಿದೆ ಎಂದು ಎನ್‌ಜಿಒ ಸಂಸ್ಥೆಯೊಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್‌ನ ನ್ಯಾಯಪೀಠ ನಡೆಸುತ್ತಿದೆ.
ರೋಹಿಣಿ ಆಶ್ರಮದ ಕಾರ್ಯವೈಖರಿ ಹಾಗೂ ದೀಕ್ಷಿತ್ ವಿರುದ್ಧದ ದೂರಿನ ಹಿನ್ನೆಲೆಯಲ್ಲಿ ಸಿಬಿಐ ನಡೆಸುತ್ತಿರುವ ತನಿಖೆಗೆ ದೀಕ್ಷಿತ್ ಹಾಜರಾಗಿದ್ದಾನೆಯೇ ಎಂದು ದಿಲ್ಲಿ ಹೈಕೋರ್ಟ್‌ನ ಪ್ರಭಾರಿ ಮುಖ್ಯ ನ್ಯಾಯಾಧೀಶರಾದ ಗೀತಾ ಮಿತ್ತಲ್ ಹಾಗೂ ನ್ಯಾಯಾಧೀಶ ಸಿ.ಹರಿಶಂಕರ್ ಅವರಿದ್ದ ನ್ಯಾಯಪೀಠವು ಪ್ರಶ್ನಿಸಿತು. ಅಲ್ಲದೆ , ದಕ್ಷಿಣ ದಿಲ್ಲಿಯ ರೋಹಿಣಿ ಪ್ರದೇಶದಲ್ಲಿರುವ ಆಶ್ರಮಕ್ಕೆ ಆಧ್ಯಾತ್ಮಿಕ ವಿಶ್ವವಿದ್ಯಾನಿಲಯ ಎಂದು ಹೆಸರಿದೆ. ಆದರೆ ಯುಜಿಸಿ ಮಾನದಂಡದಂತೆ ಈ ಆಶ್ರಮವನ್ನು ವಿಶ್ವವಿದ್ಯಾನಿಲಯ ಎಂದು ಕರೆಯುವಂತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ತನ್ನನ್ನು ವಿಶ್ವವಿದ್ಯಾನಿಲಯ ಎಂದು ಗುರುತಿಸಿಕೊಳ್ಳಬಾರದು ಎಂದು ಹೇಳಿತು. ಆದರೆ ಈ ಕುರಿತು ಯಾವುದೇ ಆದೇಶ ಜಾರಿಮಾಡಲಿಲ್ಲ. ಆಧ್ಯಾತ್ಮಿಕ ವಿಶ್ವವಿದ್ಯಾನಿಲಯ ಎಂಬ ಹೆಸರಿನ ಆಶ್ರಮಕ್ಕೆ ಯಾವುದೇ ಕಾನೂನುಬದ್ಧ ಮಾನ್ಯತೆಯಿಲ್ಲ. ಯಾಕೆಂದರೆ ಇದು ಸೊಸೈಟಿ ಅಥವಾ ಸಂಸ್ಥೆಯೆಂದು ನೋಂದಣಿಯಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಈ ಸಂದರ್ಭ ಹೇಳಿಕೆ ನೀಡಿದ ಆಶ್ರಮದ ಪರ ವಕೀಲರು, ಆಶ್ರಮವು ಯುಜಿಸಿ ಕಾರ್ಯವ್ಯಾಪ್ತಿಯಿಂದ ಹೊರತಾಗಿದೆ. ಯಾಕೆಂದರೆ ರೋಹಿಣಿ ಆಶ್ರಮವನ್ನು ದೇವರು ತನ್ನ ಅವತಾರದ ಮೂಲಕ ನಿರ್ವಹಿಸುತ್ತಿದ್ದಾರೆ ಹಾಗೂ ಇಲ್ಲಿ ದೇವರೇ ಪ್ರವಚನ ನೀಡುತ್ತಿದ್ದಾರೆ ಎಂದು ತಿಳಿಸಿದರು.