×
Ad

ಪ್ರಾರ್ಥನಾ ಸ್ಥಳಗಳಲ್ಲಿ ನೀಡಲಾಗುವ ಪ್ರಸಾದದ ಸುರಕ್ಷಿತತೆಗೆ ಸೂಚನೆ

Update: 2018-02-05 20:09 IST

ಹೊಸದಿಲ್ಲಿ, ಫೆ.5: ಪ್ರಾರ್ಥನಾ ಸ್ಥಳಗಳಲ್ಲಿ ಉಪಾಸಕರಿಗೆ ನೀಡಲಾಗುವ ‘ಪ್ರಸಾದ’ದ ಸುರಕ್ಷತೆಯ ಬಗ್ಗೆ ರೂಪಿಸಲಾದ ‘ಭೋಗ್’ ಯೋಜನೆಯನ್ನು ಜಾರಿಗೊಳಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

 ಪ್ರತೀ ದಿನ ದೇಶದಾದ್ಯಂತ ಸುಮಾರು 300 ಮಿಲಿಯನ್ ಜನತೆ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ಪ್ರಸಾದ ರೂಪದಲ್ಲಿ ಕೆಲವೆಡೆ ಸಣ್ಣಪ್ರಮಾಣದಲ್ಲಿ ಆಹಾರ ವಸ್ತು ನೀಡಿದರೆ, ಗುರುದ್ವಾರಗಳಲ್ಲಿ ‘ಲಂಗರ್’ ಎಂದು ಕರೆಯಲಾಗುವ ಪೂರ್ಣಪ್ರಮಾಣದ ಭೋಜನದ ವ್ಯವಸ್ಥೆಯಿದೆ. ದೇವಸ್ಥಾನ, ಮಸೀದಿ, ಚರ್ಚ್ ಅಥವಾ ಗುರುದ್ವಾರಗಳಲ್ಲಿ ಆಹಾರ ವಿತರಿಸಲು ‘ಫುಡ್ ಸೇಫ್ಟಿ ಆ್ಯಂಡ್ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ’ (ಎಫ್‌ಎಸ್‌ಎಸ್‌ಎಐ)ದಿಂದ ಪರವಾನಿಗೆ ಪಡೆಯಬೇಕು. ಈ ಪ್ರಾರ್ಥನಾ ಸ್ಥಳಗಳು ಆಹಾರ ಸುರಕ್ಷಾ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು. ಈ ನಿಟ್ಟಿನಲ್ಲಿ ‘ಭೋಗ್’ ಯೋಜನೆಯನ್ನು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಜಾರಿಗೊಳಿಸಬೇಕು ಹಾಗೂ ಈ ಯೋಜನೆ ಸುಸೂತ್ರವಾಗಿ ನಡೆಯಲು ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಜನವರಿ 29ರಂದು ಆದೇಶ ಹೊರಡಿಸಲಾಗಿದೆ.

  ಪ್ರಾರ್ಥನಾ ಸ್ಥಳಗಳಲ್ಲಿ ಆಹಾರದ ಸುರಕ್ಷತೆ ಹಾಗೂ ಸ್ವಚ್ಛತೆ ಕಾಯ್ದುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಫ್‌ಎಸ್‌ಎಸ್‌ಎಐ ಒಂದು ವರ್ಷದ ಹಿಂದೆ ‘ಭೋಗ್’ ಎಂಬ ಯೋಜನೆಯನ್ನು ಜಾರಿಗೊಳಿಸಿದೆ. ಇದರನ್ವಯ ಪ್ರಸಾದ ವಿತರಿಸುವವರಿಗೆ ಹಾಗೂ ಸಂಬಂಧಪಟ್ಟವರಿಗೆ ಕಾರ್ಯಾಗಾರವನ್ನೂ ಕೈಗೊಳ್ಳಲಾಗಿದೆ. ತಮಿಳುನಾಡಿನ ಮೀನಾಕ್ಷಿ ದೇವಸ್ಥಾನ, ಗುಜರಾತ್‌ನ ಸೋಮನಾಥ ದೇವಸ್ಥಾನಗಳ ಪ್ರತಿನಿಧಿಗಳು ಸೇರಿದಂತೆ ಹಲವರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಎಫ್‌ಎಸ್‌ಎಸ್‌ಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪವನ್ ಅಗರ್‌ವಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News