ಏಕದಿನ ರ‍್ಯಾಂಕಿಂಗ್‌: ಅಗ್ರ ಸ್ಥಾನಕ್ಕೆ ಮರಳಿದ ಭಾರತ

Update: 2018-02-05 18:16 GMT

ದುಬೈ, ಫೆ.5: ಸೆಂಚೂರಿಯನ್‌ನಲ್ಲಿ ರವಿವಾರ ನಡೆದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸುಲಭ ಜಯ ಸಾಧಿಸಿರುವ ಟೀಮ್ ಇಂಡಿಯಾ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ.

  ಏಕದಿನ ಸರಣಿ ಆರಂಭಕ್ಕೆ ಮೊದಲು ಭಾರತ ಹಾಗೂ ದಕ್ಷಿಣ ಆಫ್ರಿಕ ತಲಾ 120 ಅಂಕ ಹೊಂದಿದ್ದವು. ಇದೀಗ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕೇವಲ ಒಂದು ಅಂಕ ಮುನ್ನಡೆ ಸಾಧಿಸಿ ತಾತ್ಕಾಲಿಕವಾಗಿ ಅಗ್ರ ಸ್ಥಾನಕ್ಕೇರಿದೆ. ಸೆಂಚೂರಿಯನ್‌ನಲ್ಲಿ 9 ವಿಕೆಟ್‌ಗಳಿಂದ ಜಯ ಸಾಧಿಸಿರುವ ಕೊಹ್ಲಿ ಪಡೆ ತನ್ನ ಮುನ್ನಡೆ ಅಲ್ಪ ಹೆಚ್ಚಿಸಿಕೊಂಡಿದೆ.

 ಸರಣಿ ಆರಂಭಕ್ಕೆ ಮೊದಲು ಭಾರತ 4-2 ಅಂತರದಿಂದ ಸರಣಿ ಜಯಿಸಿದರೆ ಅಗ್ರ ಸ್ಥಾನಕ್ಕೇರಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ದಕ್ಷಿಣ ಆಫ್ರಿಕ ಅಗ್ರಸ್ಥಾನ ಕಾಯ್ದುಕೊಳ್ಳಲು ಸರಣಿ ಗೆಲ್ಲಬೇಕು ಅಥವಾ ಡ್ರಾ ಸಾಧಿಸುವ ಅಗತ್ಯವಿತ್ತು. ಆದರೆ ಇದೀಗ ಭಾರತ ಏಕದಿನದಲ್ಲಿ ನಂ.1 ಸ್ಥಾನಕ್ಕೇರಿದ್ದು, ಟ್ವೆಂಟಿ-20 ರ‍್ಯಾಂಕಿಂಗ್‌ನಲ್ಲೂ ಅಗ್ರ ಸ್ಥಾನಕ್ಕೇರುವ ಅವಕಾಶ ಮುಕ್ತವಾಗಿಸಿಕೊಂಡಿದೆ. ಭಾರತ ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.

 ಏಕದಿನ ರ‍್ಯಾಂಕಿಂಗ್‌ಗ್‌ನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ 2 ಸ್ಥಾನ ಕಳೆದುಕೊಂಡು ಐದನೇ ಸ್ಥಾನಕ್ಕೆ ಕುಸಿದಿದೆ. ಇಂಗೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ 4 ಪಂದ್ಯಗಳನ್ನು ಸೋತಿರುವ ಆಸ್ಟ್ರೇಲಿಯ ರ‍್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದೆ.

ಏಕದಿನ ರ‍್ಯಾಂಕಿಂಗ್‌

1. ಭಾರತ(121 ರೇಟಿಂಗ್), 2. ದ.ಆಫ್ರಿಕ(120), 3.ಇಂಗ್ಲೆಂಡ್(116), 4. ನ್ಯೂಝಿಲೆಂಡ್(115), 5. ಆಸ್ಟ್ರೇಲಿಯ (112), 6.ಪಾಕಿಸ್ತಾನ(96), 7. ಬಾಂಗ್ಲಾದೇಶ(90), 8. ಶ್ರೀಲಂಕಾ(84), 9. ವೆಸ್ಟ್‌ಇಂಡೀಸ್(76) ಹಾಗೂ 10. ಝಿಂಬಾಬ್ವೆ(53).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News