ಯೂಸುಫ್‌ಗೆ ಬರೋಡಾ ಕ್ರಿಕೆಟ್ ತಂಡ ಬುಲಾವ್
ಬರೋಡಾ, ಫೆ.5: ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ(50 ಓವರ್ ಟೂರ್ನಿ) ಆಡಲು ಹಿರಿಯ ಆಲ್‌ರೌಂಡರ್ ಯೂಸುಫ್ ಪಠಾಣ್‌ಗೆಬಿಸಿಸಿಐ ನಿರಾಕ್ಷೇಪಣಾ ಪತ್ರ(ಎನ್‌ಒಸಿ) ನೀಡಿದ ಬೆನ್ನಿಗೆ ಯೂಸುಫ್ ಪಠಾಣ್‌ಗೆ ಬರೋಡಾ ತಂಡ ಬುಲಾವ್ ನೀಡಿದೆ.
ಯೂಸುಫ್, ವಿಜಯ್ ಹಝಾರೆ ಕ್ರಿಕೆಟ್ ಟೂರ್ನಿಯಲ್ಲಿ ಬರೋಡಾ ತಂಡದ ಪರ ಆಡಲಿದ್ದಾರೆ. ಯೂಸುಫ್‌ರನ್ನು ಬರೋಡಾದ ಸಂಭಾವ್ಯ ತಂಡದಲ್ಲಿ ಆಯ್ಕೆ ಮಾಡದ ಕಾರಣ ಅವರು ಬಾಂಗ್ಲಾ ದೇಶದಲ್ಲಿ ಕ್ರಿಕೆಟ್ ಲೀಗ್ ಆಡಲು ನಿರ್ಧರಿಸಿದ್ದರು. ಕಡ್ಡಾಯ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾಗಿರುವ ಪಠಾಣ್ ಶುಕ್ರವಾರ ಪ್ರಕಟಿಸಲಾಗಿರುವ ಬರೋಡಾದ ವಿಜಯ್ ಹಝಾರೆ ಟ್ರೋಫಿ ತಂಡಕ್ಕೆ ಆಯ್ಕೆಯಾಗಿದ್ದಾರೆ.ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿರುವ ಕಾರಣ ಯೂಸುಫ್‌ಗೆ ಬಿಸಿಸಿಐ ಐದು ತಿಂಗಳ ಕಾಲ ನಿಷೇಧ ಹೇರಿತ್ತು. ಹೀಗಾಗಿ ಅವರು ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡಿರಲಿಲ್ಲ. ಬಿಸಿಸಿಐ 2017ರ ಆಗಸ್ಟ್ 15 ರಿಂದ 2018ರ ಜ.14ರ ತನಕ ಯೂಸುಫ್‌ಗೆ ನಿಷೇಧ ಹೇರಿತ್ತು. ನಿಷೇಧದ ಹಿನ್ನೆಲೆಯಲ್ಲಿ ಐಪಿಎಲ್ ಆಟಗಾರರ ಹರಾಜಿನಲ್ಲಿ ಯೂಸೂಫ್ ಹೆಸರು ಇರಲಿಲ್ಲ.
ಪಠಾಣ್ ಸಹೋದರರು ಇತ್ತೀಚೆಗಿನ ದಿನಗಳಲ್ಲಿ ಬರೋಡಾ ಕ್ರಿಕೆಟ್ ಸಂಸ್ಥೆಯೊಂದಿಗೆ ಅಹಿತಕರ ಸಂಬಂಧ ಹೊಂದಿದ್ದು, ಇರ್ಫಾನ್ ಮುಂದಿನ ಋತುವಿನಲ್ಲಿ ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡದಲ್ಲಿ ಆಡಲು ಎನ್‌ಒಸಿ ಪಡೆದಿದ್ದಾರೆ.