ದಕ್ಷಿಣ ಆಫ್ರಿಕ ಆಟಗಾರರ ಗಾಯಾಳು ಪಟ್ಟಿಗೆ ಕ್ವಿಂಟನ್ ಡಿಕಾಕ್ ಸೇರ್ಪಡೆ
ಕೇಪ್‌ಟೌನ್, ಫೆ.5: ದಕ್ಷಿಣ ಆಫ್ರಿಕದ ವಿಕೆಟ್‌ಕೀಪರ್- ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಗಾಯದ ಸಮಸ್ಯೆಯಿಂದಾಗಿ ಈಗ ನಡೆಯುತ್ತಿರುವ ಭಾರತ ವಿರುದ್ಧದ ಏಕದಿನ ಸರಣಿಯ ಉಳಿದ ಪಂದ್ಯಗಳು ಹಾಗೂ ಮುಂಬರುವ ಟ್ವೆಂಟಿ-20 ಸರಣಿಯಿಂದ ಹೊರಗುಳಿದಿದ್ದಾರೆ.
ಡಿಕಾಕ್ ಎಡ ಮಣಿಕಟ್ಟಿನ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿಯುವ ಮೂಲಕ ದಕ್ಷಿಣ ಆಫ್ರಿಕ ಆಟಗಾರರ ಗಾಯಾಳು ಪಟ್ಟಿ ಮತ್ತಷ್ಟು ಉದ್ದವಾಗಿದೆ.
ನಾಯಕ ಎಫ್‌ಡು ಪ್ಲೆಸಿಸ್, ಡೇಲ್ ಸ್ಟೇಯ್ನೆ ಹಾಗೂ ಎಬಿಡಿ ವಿಲಿಯರ್ಸ್ ಗಾಯದ ಸಮಸ್ಯೆಯಿಂದ ಭಾರತ ವಿರುದ್ಧ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಡಿಕಾಕ್ ಅನುಪಸ್ಥಿತಿಯಲ್ಲಿ ಹೊಸ ಮುಖ ವಿಕೆಟ್‌ಕೀಪರ್ ಹೆನ್ರಿಕ್ ಕ್ಲಾಸೆನ್ ಕೀಪಿಂಗ್ ನಡೆಸುವ ಸಾಧ್ಯತೆಯಿದೆ.
‘‘ರವಿವಾರ ದ್ವಿತೀಯ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಡಿಕಾಕ್ ಎಡಮಣಿಕಟ್ಟಿಗೆ ಗಾಯವಾಗಿದೆ. ಅವರಿಗೆ ವಿಪರೀತ ನೋವು ಕಾಣಿಸಿಕೊಂಡಿದ್ದು, ಹೆಚ್ಚಿನ ವೈದ್ಯಕೀಯ ತಪಾಸಣೆಯ ಬಳಿಕ ಮೂಳೆಯಲ್ಲಿ ಬಿರುಕುಬಿಟ್ಟಿದ್ದು ಗೊತ್ತಾಗಿದೆ. ಡಿಕಾಕ್ ಗಾಯ ಗುಣಮುಖವಾಗಲು 2ರಿಂದ 4ವಾರಗಳ ಅಗತ್ಯವಿದೆ. ಹೀಗಾಗಿ ಅವರು ಭಾರತ ವಿರುದ್ಧ ಏಕದಿನ ಹಾಗೂ ಟ್ವೆಂಟಿ-20 ಸರಣಿಯಿಂದ ಹೊರಗುಳಿದಿದ್ದಾರೆ. ಮುಂದಿನ ತಿಂಗಳು ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯಲ್ಲಿ ಡಿಕಾಕ್‌ರನ್ನು ಸಜ್ಜುಗೊಳಿಸಲು ಕ್ರಿಕೆಟ್ ದಕ್ಷಿಣ ಆಫ್ರಿಕದ ವೈದ್ಯಕೀಯ ತಂಡ ಎಲ್ಲ ಪ್ರಯತ್ನ ನಡೆಸಲಿದೆ’’ ಎಂದು ದಕ್ಷಿಣ ಆಫ್ರಿಕ ಟೀಮ್ ಮ್ಯಾನೇಜರ್ ಡಾ. ಮುಹಮ್ಮದ್ ಮೂಸಾಜೀ ಹೇಳಿದ್ದಾರೆ.