ಪ್ರಯೋಗಾಲಯದಲ್ಲಿ ಕಿವಿಯನ್ನು ಬೆಳೆಸಿದ ಭಾರತದ ವೈದ್ಯರು, ವಿಜ್ಞಾನಿಗಳು!

Update: 2018-02-06 14:21 GMT

ಚೆನ್ನೈ, ಫೆ.6: ತಾವು ಐದು ಮಕ್ಕಳಿಗೆ ಹೊಸ ಕಿವಿಗಳನ್ನು ಬೆಳೆಸಿದ್ದೇವೆ ಎಂದು ಚೀನಾದ ವಿಜ್ಞಾನಿಗಳು ಘೋಷಿಸಿದ ಕೆಲವೇ ವಾರಗಳ ನಂತರ ಚೆನ್ನೈಯ ಆಸ್ಪತ್ರೆಯ ವೈದ್ಯರು ತಾವು ಕೂಡಾ ಪ್ರಯೋಗಾಲಯದಲ್ಲಿ ಕಿವಿಯನ್ನು ಅಬಿವೃದ್ಧಿಪಡಿಸಿದ್ದೇವೆ ಎಂಬ ಹೇಳಿಕೆ ನೀಡಿದ್ದಾರೆ. ತಾವು ಫ್ಲಾಸ್ಕ್‌ನಲ್ಲಿ ಬೆಳೆಸಿದ್ದ ಕಿವಿಯ ಮೃದ್ವಸ್ಥಿಯ ಕೋಶಗಳ ತುಣುಕುಗಳನ್ನು ಮೊಲಗಳಿಗೆ ಅಳವಡಿಸಿದಾಗ ಅವುಗಳು ಬೆಳೆಯಲಾರಂಭಿಸಿದವು ಎಂದು ಎಸ್‌ಆರ್‌ಎಂ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಹಿಂದೆ ಮಾಡಲಾಗಿದ್ದ ಈ ರೀತಿಯ ಸಂಶೋಧನೆಗಳಲ್ಲಿ ಕೃತಕ ನಿರ್ಮಿತ ಕಿವಿಗಳನ್ನು ಅಳವಡಿಸುವಲ್ಲಿ ಇದ್ದ ತೊಡಕುಗಳು ಮತ್ತು ಇತರ ಪ್ರಾಣಿಗಳ ದೇಹದಲ್ಲಿ ಅವುಗಳು ಬೆಳೆಯಲು ಅಸಾಧ್ಯವಾಗಿದ್ದ ಕಾರಣದಿಂದ ವಿಫಲವಾಗಿದ್ದವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಹುಟ್ಟುವಾಗಲೇ ಕಿವಿಯಲ್ಲಿ ನ್ಯೂನತೆ ಹೊಂದಿರುವ ಮಗುವಿಗೆ ಈ ಕೃತಕ ಕಿವಿಯನ್ನು ಅಳವಡಿಸಲು ಸಾಧ್ಯವಾಗುವಂತೆ ಮಾಡಲು ನಾವು ಮಾಡಬೇಕಾದ ಕೆಲಸ ಬಹಳಷ್ಟಿದೆ. ಆದರೆ ಈಗ ನಮಗೆ ಈ ವಿಷಯದಲ್ಲಿ ಸರಿಯಾದ ದಾರಿಯೊಂದು ಸಿಕ್ಕಿದೆ ಎಂದು ಎಸ್‌ಐಎಂಎಸ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮತ್ತು ಹಿರಿಯ ಪ್ಲಾಸ್ಟಿಕ್ ಸರ್ಜರಿ ತಜ್ಞರಾದ ಡಾ. ಕೆ. ಶ್ರೀಧರ್ ತಿಳಿಸಿದ್ದಾರೆ.

ತಾವು ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವ ತಂತ್ರಜ್ಞಾನವನ್ನು ಪೇಟೆಂಟ್ ಮಾಡುವುದಾಗಲೀ ಅಥವಾ ತಮ್ಮ ಸಂಶೋಧನೆಯ ನೀಲಿನಕ್ಷೆಯನ್ನು ಮುದ್ರಿಸುವ ಗೋಜಿಗಾಗಲೀ ಸದ್ಯ ವಿಜ್ಞಾನಿಗಳು ಮತ್ತು ವೈದ್ಯರ ತಂಡ ಹೋಗಿಲ್ಲ. ಚೀನಾದ ವಿಜ್ಞಾನಿಗಳು, ತಾವು ಐದು ಮಕ್ಕಳಿಗೆ ಕೃತಕ ಕಿವಿಗಳನ್ನು ಅಳವಡಿಸಿರುವ ಬಗ್ಗೆ ಘೋಷಿಸಿದ ನಂತರವೇ ನಾವು ನಮ್ಮ ಅನ್ವೇಷಣೆಯ ಬಗ್ಗೆ ಜಗತ್ತಿಗೆ ತಿಳಿಸಲು ನಿರ್ಧರಿಸಿದ್ದೆವು ಎಂದು ಅವರು ತಿಳಿಸಿದ್ದಾರೆ.

ಈ ಸಂಶೋಧನೆಗಾಗಿ ಮೃದ್ವಸ್ಥಿಯನ್ನು ಮೊಲಗಳ ಕಿವಿಗಳಿಂದ ಪಡೆಯಲಾಗುತ್ತದೆ. ಈ ಮೃದ್ವಸ್ಥಿಗಳನ್ನು ವಿಶೇಷವಾದ ದ್ರಾವಣದಲ್ಲಿ ಮೂರು ವಾರಗಳ ಕಾಲ ಬೆಳೆಸಲಾಗುತ್ತದೆ. ಈ ದ್ರಾವಣವು ನೈಸರ್ಗಿಕ ಮತ್ತು ಅನೈಸರ್ಗಿಕ ವಸ್ತುಗಳ ಮಿಶ್ರಣವಾಗಿದ್ದು ಕೋಶಗಳಿಗೆ ಸಾಕಷ್ಟು ಪೌಷ್ಟಿಕಾಂಶಗಳನ್ನು ಪೂರೈಸುತ್ತದೆ. ಈ ಕೋಶಗಳು ಸಂಪೂರ್ಣವಾಗಿ ಬೆಳೆದ ನಂತರ ಅವುಗಳನ್ನು ಕಿವಿಯ ರೂಪದಲ್ಲಿರುವ 3ಡಿ ಜೈವಿಕ ಅಚ್ಚಿನಲ್ಲಿ ಹಾಕಿ ರೂಪ ನೀಡಲಾಗುತ್ತದೆ. ಸಾಕಷ್ಟು ಕೋಶಗಳು ಅಚ್ಚಿನೊಳಗೆ ಶೇಖರವಾದ ನಂತರ ಅವುಗಳನ್ನು ಮೊಲದ ದೇಹಕ್ಕೆ ಅಳವಡಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News