1ನೇ ತರಗತಿ ವಿದ್ಯಾರ್ಥಿಗೆ ಮೂತ್ರ ಮಿಶ್ರಿತ ಜ್ಯೂಸ್ ಕುಡಿಸಿದ ಅಧ್ಯಾಪಕ
ಹೈದರಾಬಾದ್, ಫೆ. 6: ಮೂತ್ರ ಬೆರೆಸಿದ ಜ್ಯೂಸ್ ಕುಡಿಯುವಂತೆ 1ನೇ ತರಗತಿ ವಿದ್ಯಾರ್ಥಿಯನ್ನು ಬಲವಂತಪಡಿಸಿದ ಆರೋಪದಲ್ಲಿ ಪ್ರಕಾಶಂ ಜಿಲ್ಲೆಯ ಅಧ್ಯಾಪಕರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿರಾಲ-ಪೆರಾಲ ಪಟ್ಟಣದ ಎಸ್‌ಪಿಆರ್ ವಿದ್ಯಾ ಕಾನ್ಸೆಪ್ಟ್ 1ನೇ ತರಗತಿ ವಿದ್ಯಾರ್ಥಿ ಫೆಬ್ರವರಿ 3ರಂದು ಸಹಪಾಠಿಯ ಜ್ಯೂಸ್ ಬಾಟಲಿಯಲ್ಲಿ ಮೂತ್ರ ಬೆರೆಸಿದ್ದ. ಆದಾಗ್ಯೂ, ಜ್ಯೂಸ್ ಕುಡಿಯದಂತೆ ಬಾಲಕಿಯಲ್ಲಿ ವಿನಂತಿಸಿದ್ದ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಎ ಸೂರ್ಯನಾರಾಯಣನ್ ತಿಳಿಸಿದ್ದಾರೆ. ಬಾಲಕಿ ಅಳುತ್ತಾ ತರಗತಿಯಿಂದ ಹೊರಗೆ ಹೋಗಿ ದೈಹಿಕ ಶಿಕ್ಷಕ ವಿಜಯ ಕುಮಾರ್ ಅವರಲ್ಲಿ ದೂರು ನೀಡಿದ್ದರು. ಕುಮಾರ್ ಬಾಲಕನನ್ನು ಕರೆದು ಮೂತ್ರ ಬೆರೆಸಿದ ಜ್ಯೂಸ್ ಕುಡಿಯುವಂತೆ ಬಲವಂತ ಮಾಡಿದ್ದರು. ಬಾಲಕ ಕ್ಷಮಿಸುವಂತೆ ಕೋರಿದರೂ ಕೇಳದ ಕುಮಾರ್ ಬಾಲಕನಿಗೆ ಬಾಟಲಿಯ ಪೂರ್ಣ ಜ್ಯೂಸ್ ಕುಡಿಸಿದ್ದರು ಎಂದು ಸೂರ್ಯನಾರಾಯಣ ತಿಳಿಸಿದ್ದಾರೆ. ಶಿಕ್ಷೆ ನೀಡಿರುವುದು ತಿಳಿದ ಬಳಿಕ ಬಾಲಕನ ಹೆತ್ತವರು ಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ. ಕುಮಾರ್ ಗೊತ್ತಿದ್ದೇ ಬಾಲಕನಿಗೆ ಶಿಕ್ಷೆ ನೀಡಲಾಗಿದೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಅವರು ಸೋಮವಾರ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದರು.