‘ಹಿಸ್ ಎಕ್ಸಲೆನ್ಸಿ’ ಪದ ಬಳಸದಿರಲು ವೆಂಕಯ್ಯ ನಾಯ್ಡು ಸಲಹೆ

Update: 2018-02-06 15:24 GMT

ಹೊಸದಿಲ್ಲಿ, ಫೆ.6: ಸದನದಲ್ಲಿ ಜನಪ್ರತಿನಿಧಿಗಳು ಸದನದ ಅಧ್ಯಕ್ಷರನ್ನು ಸಂಬೋಧಿಸುವಾಗ ‘ಹಿಸ್ ಎಕ್ಸಲೆನ್ಸಿ’ ಎಂಬ ಪದ ಬಳಸದಿರಲು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಜ್ಯಸಭೆಯಲ್ಲಿ ಸಲಹೆ ನೀಡಿದ್ದಾರೆ.

    ಸಭಾಧ್ಯಕ್ಷರನ್ನು ಸಂಬೋಧಿಸುವಾಗ ‘ಹಿಸ್ ಎಕ್ಸಲೆನ್ಸಿ’ (ಘನತೆವೆತ್ತ, ಸರ್ವಮಾನ್ಯ) ಎಂಬ ವಿಶೇಷಣವನ್ನು ಬಳಸುವುದು ಇದುವರೆಗಿನ ಸಂಪ್ರದಾಯವಾಗಿತ್ತು. ಆದರೆ ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಿ ನೇಮಕಗೊಂಡ ಬಳಿಕ ಹಲವು ಸಂಪ್ರದಾಯಗಳಿಗೆ ತಿಲಾಂಜಲಿ ನೀಡಲಾಗಿದೆ. ಇನ್ನು ಮುಂದೆ ‘ಹಿಸ್ ಎಕ್ಸಲೆನ್ಸಿ’ ಎನ್ನುವ ಬದಲು ಗೌರವಾನ್ವಿತ ಸಭಾಧ್ಯಕ್ಷರೇ/ಉಪರಾಷ್ಟ್ರಪತಿಗಳೇ ಎಂದು ಉಲ್ಲೇಖಿಸುವಂತೆ ನಾಯ್ಡು ಸಲಹೆ ನೀಡಿದ್ದಾರೆ.

  ರಾಜ್ಯಸಭೆ ಕಲಾಪದ ಶೂನ್ಯವೇಳೆಯಲ್ಲಿ ಸಂಯುಕ್ತ ಜನತಾ ದಳದ ಸದಸ್ಯ ಹರ್‌ವಂಶ್ ನಾರಾಯಣ್ ಸಿಂಗ್ ಅವರು ವಿಷಯವೊಂದನ್ನು ಪ್ರಸ್ತಾವಿಸುವ ಮೊದಲು ‘ಹಿಸ್ ಎಕ್ಸಲೆನ್ಸಿ’ ಎಂದು ಉಲ್ಲೇಖಿಸಿದಾಗ ಮಧ್ಯಪ್ರವೇಶಿಸಿದ ನಾಯ್ಡು, ಉಪರಾಷ್ಟ್ರಪತಿಯನ್ನು ಈ ರೀತಿ ಸಂಬೋಧಿಸುವುದರಿಂದ ಮುಜುಗುರವಾಗುತ್ತದೆ. ಇನ್ನು ಮುಂದೆ ಈ ರೀತಿಯ ವಿಷೇಷಣಗಳನ್ನು ಬಳಸುವ ಅಗತ್ಯವಿಲ್ಲ ಎಂದು ತಿಳಿಸಿದರು.

     ವಸಾಹತುಶಾಹಿ ಪದಭಂಡಾರದ ಪದಗಳನ್ನು ಬಳಸುವುದನ್ನು ಈ ಹಿಂದೆಯೂ ವೆಂಕಯ್ಯ ನಾಯ್ಡು ವಿರೋಧಿಸಿದ್ದರು. ಸದನದ ಕಲಾಪದ ಸಂದರ್ಭ ಸದಸ್ಯರು ಪ್ರಶ್ನೆಗಳನ್ನು ಮಂಡಿಸುವ ಮೊದಲು ‘ ನಾನು ಬೇಡಿಕೊಳ್ಳುತ್ತೇನೆ’ ಎಂಬ ಪದ ಬಳಸುವುದು ಬೇಡ. ಅದರ ಬದಲು, ನಾನು ಪ್ರಶ್ನೆಗಳನ್ನು ಸದನದಲ್ಲಿ ಮಂಡಿಸುತ್ತೇನೆ ಎಂದು ಸರಳವಾಗಿ ತಿಳಿಸುವಂತೆ ಚಳಿಗಾಲದ ಅಧಿವೇಶನದ ಸಂದರ್ಭ ನಾಯ್ಡು ಸೂಚಿಸಿದ್ದರು. ಅಲ್ಲದೆ ಸಂಸತ್ ಕಲಾಪಕ್ಕೆ ತಡವಾಗಿ ಆಗಮಿಸುವ ಸದಸ್ಯರು ಹಾಗೂ ಸಚಿವರ ನಡೆಯನ್ನು ಖಂಡಿಸಿದ್ದರು. ಸಚಿವರಿಗೆ ಬೇರೆ ಕಾರ್ಯಕ್ರಮವಿದ್ದರೆ ಸದನದಲ್ಲಿ ಪೇಪರ್‌ಗಳನ್ನು ಮಂಡಿಸುವ ಅಗತ್ಯವಿಲ್ಲ. ಪೇಪರ್ ಮಂಡಿಸಿದವರು ಕ್ಲಪ್ತಕಾಲಕ್ಕೆ ಸದನಕ್ಕೆ ಆಗಮಿಸುವಂತೆ ಕ್ರಮ ಕೈಗೊಳ್ಳುವಂತೆ ಸಂಸದೀಯ ವ್ಯವಹಾರ ಸಚಿವರಿಗೆ ಸಲಹೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News