×
Ad

ನಾಗರಿಕರ ಮೇಲೆ ಅನಿಲ ದಾಳಿ: ಸಿರಿಯ ಅಧ್ಯಕ್ಷರನ್ನು ರಕ್ಷಿಸುತ್ತಿರುವ ರಶ್ಯ

Update: 2018-02-06 21:45 IST

ವಿಶ್ವಸಂಸ್ಥೆ, ಫೆ. 6: ಇತ್ತೀಚಿನ ವಾರಗಳಲ್ಲಿ ನಾಗರಿಕರ ಮೇಲೆ ಹಲವಾರು ಬಾರಿ ಕ್ಲೋರಿನ್ ಅನಿಲ ದಾಳಿಗಳನ್ನು ನಡೆಸಿದ ಹೊಣೆಯಿಂದ ಸಿರಿಯ ಅಧ್ಯಕ್ಷ ಬಶರ್ ಅಲ್ ಅಸಾದ್‌ರನ್ನು ರಕ್ಷಿಸಲು ರಶ್ಯ ಪ್ರಯತ್ನಿಸುತ್ತಿದೆ ಎಂದು ಅಮೆರಿಕದ ರಾಯಭಾರಿ ನಿಕ್ಕಿ ಹೇಲಿ ಸೋಮವಾರ ಆರೋಪಿಸಿದ್ದಾರೆ.

ರಾಜಧಾನಿ ಡಮಾಸ್ಕಸ್‌ನ ಬಂಡುಕೋರ ನಿಯಂತ್ರಣದ ಉಪನಗರ ಘೌಟದ ಮೇಲೆ ಗುರುವಾರ ನಡೆದ ಕ್ಲೋರಿನ್ ಅನಿಲ ದಾಳಿ ಸೇರಿದಂತೆ ನಾಗರಿಕರ ಮೇಲೆ ನಡೆದ ಹಲವಾರು ಅನಿಲ ದಾಳಿಗಳನ್ನು ಖಂಡಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಹೇಳಿಕೆ ಅನುಮೋದನೆಯನ್ನು ರಶ್ಯ ವಿಳಂಬಿಸುತ್ತಿದೆ ಎಂದು ಹೇಲಿ ಮಂಡಳಿಗೆ ತಿಳಿಸಿದರು.

ಘೌಟದಲ್ಲಿ ನಡೆದ ದಾಳಿಯಲ್ಲಿ ಮಕ್ಕಳು ಸೇರಿದಂತೆ 20ಕ್ಕೂ ಅಧಿಕ ನಾಗರಿಕರು ಗಾಯಗೊಂಡಿದ್ದಾರೆ.

ಇದಕ್ಕೆ ತಿರುಗೇಟು ನೀಡಿದ ರಶ್ಯ ರಾಯಭಾರಿ ವಾಸಿಲಿ ನೆಬೆಂಝಿಯ, ‘‘ಸಿರಿಯ ಸರಕಾರ ರಾಸಾಯನಿಕ ಅಸ್ತ್ರಗಳನ್ನು ಬಳಸುತ್ತಿದೆ ಎಂಬುದಾಗಿ ಆರೋಪಿಸುವುದು ಇದರ ಉದ್ದೇಶ ಎನ್ನುವುದು ನಮಗೆ ಸ್ಪಷ್ಟವಾಗಿ ಅರ್ಥವಾಗಿದೆ ಎಂದು ಹೇಳಿದರು. ರಾಸಾಯನಿಕ ದಾಳಿಗಳನ್ನು ಯಾರು ನಡೆಸಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲಾಗಿಲ್ಲ ಎಂದು ಅವರು ನುಡಿದರು.

 2014 ಮತ್ತು 2015ರಲ್ಲಿ ಕನಿಷ್ಠ 2 ದಾಳಿಗಳಲ್ಲಿ ಸಿರಿಯ ಸರಕಾರ ಕ್ಲೋರಿನ್ ಅನಿಲವನ್ನು ಬಳಸಿದೆ ಹಾಗೂ ಎಪ್ರಿಲ್ 4ರಂದು ಖಾನ್ ಶೈಖೂನ್‌ನಲ್ಲಿ ನಡೆದ ವಾಯು ದಾಳಿಯಲ್ಲಿ ನರ ಮಂಡಲಕ್ಕೆ ಹಾನಿ ಮಾಡುವ ಸಾರಿನ್ ಅನಿಲವನ್ನು ಬಳಸಲಾಗಿದೆ ಎಂಬುದಾಗಿ ವಿಶ್ವಸಂಸ್ಥೆ ಮತ್ತು ರಾಸಾಯನಿಕ ಅಸ್ತ್ರಗಳ ನಿಷೇಧ ಸಂಘಟನೆಯ ಪರಿಣತರನ್ನೊಳಗೊಂಡ ಜಂಟಿ ತನಿಖಾ ತಂಡವೊಂದು ತೀರ್ಮಾನಿಸಿದೆ.

ಖಾನ್ ಶೈಖೂನ್‌ನಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 100 ಮಂದಿ ಮೃತಪಟ್ಟಿದ್ದಾರೆ ಹಾಗೂ 200ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News