ನಾಳೆ 3ನೇ ಏಕದಿನ: ಕೊಹ್ಲಿ ಪಡೆಗೆ ಹ್ಯಾಟ್ರಿಕ್ ಕನಸು

Update: 2018-02-06 18:24 GMT

ಕೇಪ್‌ಟೌನ್, ಫೆ.6: ಸತತ ಎರಡು ಬಾರಿ ಜಯ ಸಾಧಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಭಾರತ ತಂಡ ಬುಧವಾರ ಇಲ್ಲಿನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕವನ್ನು ಎದುರಿಸಲಿದೆ. 6 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಆತಿಥೇಯರ ವಿರುದ್ಧ ಮಾನಸಿಕ ಹಾಗೂ ದೈಹಿಕವಾಗಿ ಮೇಲುಗೈ ಸಾಧಿಸಿರುವ ವಿರಾಟ್ ಕೊಹ್ಲಿ ಬಳಗ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ. ಮತ್ತೊಂದೆಡೆ, ಹರಿಣಪಡೆಗೆ ಆಟಗಾರರ ಗಾಯಾಳು ಸಮಸ್ಯೆ ಬೆಂಬಿಡದೇ ಕಾಡುತ್ತಿದೆ.

ದಕ್ಷಿಣ ಆಫ್ರಿಕ ತಂಡ ಮೊದಲ ಟೆಸ್ಟ್‌ನಲ್ಲಿ ಡೇಲ್ ಸ್ಟೇಯ್ನ್ ಸೇವೆಯಿಂದ ವಂಚಿತವಾಯಿತು. ಇದೀಗ ಮೂರನೇ ಏಕದಿನ ತನಕ ಎಬಿಡಿವಿಲಿಯರ್ಸ್ ಅನುಪಸ್ಥಿತಿ ಎದುರಿಸುವಂತಾಗಿದೆ. ನಾಯಕ ಎಫ್‌ಡು ಪ್ಲೆಸಿಸ್ ಹಾಗೂ ಕ್ವಿಂಟನ್ ಡಿಕಾಕ್ ಗಾಯದ ಸಮಸ್ಯೆಯಿಂದಾಗಿ ಏಕದಿನ ಸರಣಿಯ ಉಳಿದ ಪಂದ್ಯಗಳು ಹಾಗೂ ಮುಂಬರುವ ಟ್ವೆಂಟಿ-20 ಸರಣಿಯಿಂದಲೂ ಹೊರಗುಳಿದಿದ್ದಾರೆ.

 ಪ್ರಮುಖ ಆಟಗಾರರು ಗಾಯಗೊಂಡಿರುವ ಕಾರಣ ಸರಣಿಯಲ್ಲಿ 0-2 ಹಿನ್ನಡೆಯಲ್ಲಿರುವ ದಕ್ಷಿಣ ಆಫ್ರಿಕ ಚೇತರಿಸಿಕೊಳ್ಳುವ ಸಾಧ್ಯತೆ ತೀರಾ ವಿರಳ. ಪ್ರವಾಸಿ ಭಾರತ ತಂಡ ಡರ್ಬನ್ ಹಾಗೂ ಸೆಂಚೂರಿಯನ್‌ನಲ್ಲಿ ನಡೆದಿರುವ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 6 ಹಾಗೂ 9 ವಿಕೆಟ್‌ಗಳ ಜಯ ಸಾಧಿಸಿದೆ. ಏಕದಿನ ಸರಣಿ ಆರಂಭಕ್ಕೆ ಮೊದಲು ವಿಶ್ವದ ನಂ.1 ಏಕದಿನ ತಂಡವಾಗಿದ್ದ ದಕ್ಷಿಣ ಆಫ್ರಿಕ ಸ್ವದೇಶದಲ್ಲಿ ಸತತ 17 ಪಂದ್ಯಗಳನ್ನು ಜಯಿಸಿದ ಸಾಧನೆ ಮಾಡಿತ್ತು. ಆದರೆ, 5 ದಿನಗಳಲ್ಲಿ ಸತತ 2 ಪಂದ್ಯಗಳನ್ನು ಸೋತಿದೆ. ಭಾರತಕ್ಕೆ ನಂ.1 ಸ್ಥಾನ ಬಿಟ್ಟುಕೊಟ್ಟಿದೆ. ಪ್ರಮುಖ ಆಟಗಾರರು ಗಾಯಗೊಂಡಿದ್ದಾರೆ. ಅನನುಭವಿ ಮರ್ಕರಮ್ ತಂಡದ ನಾಯಕತ್ವವಹಿಸಿಕೊಳ್ಳುವಂತಾಗಿದೆ.

ಭಾರತಕ್ಕೆ ಈತನಕ ದ್ವಿಪಕ್ಷೀಯ ಸರಣಿಯಲ್ಲಿ ದಕ್ಷಿಣ ಆಫ್ರಿಕವನ್ನು ಸೋಲಿಸಲು ಸಾಧ್ಯವಾಗಿಲ್ಲ. ಭಾರತ ಈ ಹಿಂದೆ 1992-93 ಹಾಗೂ 2010-11ರಲ್ಲಿ ದ.ಆಫ್ರಿಕದಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ 2 ಪಂದ್ಯಗಳನ್ನು ಜಯಿಸಲು ಶಕ್ತವಾಗಿತ್ತು. ಆದರೆ, ಎರಡೂ ಸರಣಿಯನ್ನು 3-2 ಹಾಗೂ 5-2 ಅಂತರದಿಂದ ಸೋತಿತ್ತು. ದಕ್ಷಿಣ ಆಫ್ರಿಕ ಕ್ರಿಕೆಟ್ ಮಂಡಳಿ ಈತನಕ ಡಿಕಾಕ್ ಬದಲಿ ಆಟಗಾರನನ್ನು ನೇಮಿಸಿಲ್ಲ. ತಂಡದಲ್ಲಿರುವ ಹೆನ್ರಿಕ್ ಕ್ಲಾಸೆನ್ ಚೊಚ್ಚಲ ಪಂದ್ಯ ಆಡುವ ಸಾಧ್ಯತೆಯಿದೆ. ಹೆನ್ರಿಕ್ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಮೂರನೇ ಗರಿಷ್ಠ ಸ್ಕೋರ್ ಗಳಿಸಿದ್ದಾರೆ.

   ಕ್ಲಾಸೆನ್ ಈತನಕ ಭಾರತದ ಸ್ಪಿನ್‌ದ್ವಯರಾದ ಯಜುವೇಂದ್ರ ಚಹಾಲ್ ಹಾಗೂ ಕುಲ್‌ದೀಪ್ ಯಾದವ್ ದಾಳಿಯನ್ನು ಎದುರಿಸಿಲ್ಲ. ಈ ಇಬ್ಬರು ಸ್ಪಿನ್ನರ್‌ಗಳು 2 ಪಂದ್ಯಗಳಲ್ಲಿ 13 ವಿಕೆಟ್ ಕಬಳಿಸಿದ್ದಾರೆ. ಆತಿಥೇಯರು ರೊಂಡೊರನ್ನು ಕೈಬಿಟ್ಟು ಅನುಭವಿ ಆಟಗಾರ ಫರ್ಹಾನ್ ಬೆಹಾರ್ದಿನ್‌ರನ್ನು ತಂಡಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆಯಿದೆ. 35 ಟೆಸ್ಟ್ ಪಂದ್ಯಗಳಲ್ಲಿ 35 ಆಟಗಾರರಿಗೆ ಅವಕಾಶ ನೀಡಿ ಟೀಕೆಗೆ ಗುರಿಯಾಗಿರುವ ವಿರಾಟ್ ಕೊಹ್ಲಿ 3ನೇ ಏಕದಿನದಲ್ಲಿ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಒಂದು ವೇಳೆ ಭಾರತ ಜಯ ಸಾಧಿಸಿದರೆ ನ್ಯೂಲ್ಯಾಂಡ್ಸ್‌ನಲ್ಲಿ 3ನೇ ಜಯ ಸಾಧಿಸಿದಂತಾಗುತ್ತದೆ. ಭಾರತ 1992ರ ನಂತರ ಈ ಮೈದಾನದಲ್ಲಿ 4 ಪಂದ್ಯಗಳನ್ನು ಆಡಿದ್ದು, 2ರಲ್ಲಿ ಗೆಲುವು, 2ರಲ್ಲಿ ಸೋಲುಂಡಿದೆ.

ತಂಡಗಳು

►ಭಾರತ(ಸಂಭಾವ್ಯ): ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ಎಂ.ಎಸ್.ಧೋನಿ(ವಿಕೆಟ್‌ಕೀಪರ್), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್, ಕುಲ್‌ದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಯಜುವೇಂದ್ರ ಚಹಾಲ್.

►ದ.ಆಫ್ರಿಕ(ಸಂಭಾವ್ಯ): ಹಾಶಿಮ್ ಅಮ್ಲ, ಏಡೆನ್ ಮರ್ಕರಮ್(ನಾಯಕ), ಜೆ.ಪಿ. ಡುಮಿನಿ, ಹೆನ್ರಿಕ್ ಕ್ಲಾಸೆನ್(ವಿಕೆಟ್‌ಕೀಪರ್), ಖಯಾ ರೊಂಡೊ, ಡೇವಿಡ್ ಮಿಲ್ಲರ್, ಕ್ರಿಸ್ ಮೋರಿಸ್, ಫೆಲುಕ್ವಾವೊ/ಶಂಸಿ, ಕಾಗಿಸೊ ರಬಾಡ, ಮೊರ್ನೆ ಮೊರ್ಕೆಲ್ ಹಾಗೂ ಇಮ್ರಾನ್ ತಾಹಿರ್.

ನಿಮಗಿದು ಗೊತ್ತೇ?

►ಒಂದು ವೇಳೆ ಭಾರತ ಮೂರನೇ ಏಕದಿನ ಪಂದ್ಯ ಜಯಿಸಿದರೆ ದಕ್ಷಿಣ ಆಫ್ರಿಕ ವಿರುದ್ಧ ಸರಣಿಯಲ್ಲಿ ಮೊದಲ ಬಾರಿ ಹ್ಯಾಟ್ರಿಕ್ ಜಯ ಸಾಧಿಸಿದಂತಾಗುತ್ತದೆ.

►ಹಾಶೀಮ್ ಅಮ್ಲ ಭಾರತ ವಿರುದ್ಧ ಕಳೆದ 10 ಇನಿಂಗ್ಸ್‌ಗಳಲ್ಲಿ ಅರ್ಧಶತಕವನ್ನು ಬಾರಿಸಿಲ್ಲ. ಅಮ್ಲ ಇದೇ ಮೊದಲ ಬಾರಿ ರನ್ ಬರ ಎದುರಿಸುತ್ತಿದ್ದಾರೆ. ನ್ಯೂಲ್ಯಾಂಡ್ಸ್‌ನಲ್ಲಿ ಆಮ್ಲ 6 ಪಂದ್ಯಗಳಲ್ಲಿ ಕೇವಲ 180 ರನ್ ಗಳಿಸಿದ್ದಾರೆ.

►ಭಾರತದ ಸ್ಪಿನ್ನರ್‌ಗಳು ಸರಣಿಯಲ್ಲಿ ಈವರೆಗೆ 11.61ರ ಸರಾಸರಿಯಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರತಿ ಓವರ್‌ಗೆ ಕೇವಲ 3.74 ಇಕಾನಮಿ ರೇಟ್ ಹೊಂದಿದ್ದಾರೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕದ ಸ್ಪಿನ್ನರ್‌ಗಳು ಇನ್ನಷ್ಟೇ ವಿಕೆಟ್ ಪಡೆಯಬೇಕಾಗಿದೆ. ಪ್ರತಿ ಓವರ್‌ಗೆ 6 ರನ್ ನೀಡಿದ್ದಾರೆ.

►ಮೊರ್ನೆ ಮೊರ್ಕೆಲ್ ನ್ಯೂಲ್ಯಾಂಡ್ಸ್‌ನಲ್ಲಿ ಆಡಿರುವ 4 ಪಂದ್ಯಗಳಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

►ನ್ಯೂಲ್ಯಾಂಡ್ಸ್ ದಕ್ಷಿಣ ಆಫ್ರಿಕ ನೆಚ್ಚಿನ ಮೈದಾನದ ಪೈಕಿ ಒಂದಾಗಿದೆ. ಈ ಮೈದಾನದಲ್ಲಿ ಆಡಿರುವ 33 ಪಂದ್ಯಗಳ ಪೈಕಿ 28ರಲ್ಲಿ ಜಯ ಸಾಧಿಸಿದೆ. ಗೆಲುವಿನ ಶೇಕಡಾಂಶ 85.

►ಭಾರತ 2010ರ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ದ್ವಿಪಕ್ಷೀಯ ಸರಣಿ ಜಯಿಸಿದೆ.

►ದಕ್ಷಿಣ ಆಫ್ರಿಕದ ಬ್ಯಾಟ್ಸ್‌ಮನ್ ಜೆಪಿ ಡುಮಿನಿ ನ್ಯೂಲ್ಯಾಂಡ್ಸ್ ನಲ್ಲಿ ಆಡಿರುವ 8 ಪಂದ್ಯಗಳಲ್ಲಿ ಒಟ್ಟು 301 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳಿವೆ.

ಪಿಚ್ ಹಾಗೂ ವಾತಾವರಣ

ದಕ್ಷಿಣ ಆಫ್ರಿಕಕ್ಕೆ ನ್ಯೂಲ್ಯಾಂಡ್ಸ್ ಪಿಚ್ ಅದೃಷ್ಟದ ತಾಣವಾ ಗಿದೆ. ವೇಗಿಗಳ ಪೈಕಿ ಕಾಗಿಸೊ ರಬಾಡ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಬಹುದು. ಪಿಚ್ ದಾಂಡಿಗರ ಸ್ನೇಹಿಯಾಗಿದೆ. ಕಳೆದ 6 ಏಕದಿನಗಳಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 311. ಬುಧವಾರ ಉಷ್ಣಾಂಶದಲ್ಲಿ ಏರಿಕೆಯಾಗುವ ಸಾಧ್ಯತೆಯಿದ್ದು, ಮಧ್ಯಾಹ್ನದ ವೇಳೆ ಉಷ್ಣಾಂಶ 30 ಡಿಗ್ರಿ ಸೆಲ್ಶಿಯಸ್‌ಗೆ ತಲುಪುವ ನಿರೀಕ್ಷೆಯಿದೆ.

ಪಂದ್ಯದ ಸಮಯ: ಸಂಜೆ 4:30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News