ಫೆಡ್ ಕಪ್: ಭಾರತದ ಅಂಕಿತಾ-ಕರ್ಮನ್ ಗೆ ಕಠಿಣ ಸವಾಲು

Update: 2018-02-06 18:28 GMT

ಹೊಸದಿಲ್ಲಿ, ಫೆ.6: ಫೆಡ್‌ಕಪ್ ವರ್ಲ್ಡ್ ಗ್ರೂಪ್ ಪ್ಲೇ-ಆಫ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಅಂಕಿತಾ ರಾಣಾ ಹಾಗೂ ಕರ್ಮನ್ ಕೌರ್ ಕಠಿಣ ಸವಾಲು ಎದುರಿಸಲಿದ್ದಾರೆ.

 ಬುಧವಾರ ಆರಂಭವಾಗಲಿರುವ ಏಷ್ಯಾ/ಓಶಿಯಾನಿಯಾ ಗ್ರೂಪ್-1 ಸ್ಪರ್ಧೆಯಲ್ಲಿ ಭಾರತದ ಯುವ ಆಟಗಾರ್ತಿಯರು ಎದುರಾಳಿ ತಂಡಕ್ಕೆ ಸವಾಲೊಡ್ಡುವ ವಿಶ್ವಾಸದಲ್ಲಿದ್ದಾರೆ. ಭಾರತ 1991ರ ಬಳಿಕ ಫೆಡ್ ಕಪ್ ಗ್ರೂಪ್‌ಗೆ ಅರ್ಹತೆ ಪಡೆದಿಲ್ಲ. ಭಾರತ ಅಗ್ರ-60 ಆಟಗಾರರನ್ನು ಹೊಂದಿರುವ ಕಝಕಿಸ್ತಾನ, ಹಾಂಕಾಂಗ್ ಹಾಗೂ ಚೀನಾ ತಂಡಗಳಿರುವ ‘ಎ’ ಗುಂಪಿನಲ್ಲಿರುವ ಕಾರಣ ಕಠಿಣ ಸವಾಲು ಎದುರಿಸಬೇಕಾಗಿದೆ. ‘ಬಿ’ ಗುಂಪಿನಲ್ಲಿ ಜಪಾನ್, ಚೈನೀಸ್ ತೈಪೆ, ಥಾಯ್ಲೆಂಡ್ ಹಾಗೂ ಕೊರಿಯಾ ತಂಡಗಳಿವೆ.

2017ರ ಋತುವಿನಲ್ಲಿ ಅಂಕಿತಾ ಹಾಗೂ ಕರ್ಮನ್ ಸಾಧಾರಣ ಪ್ರದರ್ಶನ ನೀಡಿದ್ದರು. ಐಟಿಎಫ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಲುಯಾನ್‌ನಲ್ಲಿ ನಡೆದ 60,000 ಡಾಲರ್ ಬಹುಮಾನ ಮೊತ್ತದ ಟೂರ್ನಿಯ ಸಿಂಗಲ್ಸ್‌ನಲ್ಲಿ ಅಂಕಿತಾ ಫೈನಲ್‌ಗೆ ತಲುಪಿದ್ದಾರೆ.

ಆತಿಥೇಯ ತಂಡದ ನಂ.1 ಹಾಗೂ ಅನುಭವಿ ಆಟಗಾರ್ತಿಯಾಗಿರುವ ಅಂಕಿತಾ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ.

ಭಾರತ ಮೊದಲ ದಿನವಾದ ಬುಧವಾರ ಚೀನಾ ತಂಡವನ್ನು ಎದುರಿಸಲಿದೆ. ರೈನಾ ವಿಶ್ವದ ನಂ.120ನೇ ಆಟಗಾರ್ತಿ ಲಿನ್ ಝುರನ್ನು ಎದುರಿಸಲಿದ್ದಾರೆ. ದಿಲ್ಲಿ ಆಟಗಾರ್ತಿ ಕರ್ಮನ್ 2017ರಲ್ಲಿ ಸಿಂಗಲ್ಸ್‌ನಲ್ಲಿ ಎರಡು ಬಾರಿ ಫೈನಲ್‌ಗೆ ತಲುಪಿದ್ದರು. ಒಂದು ಬಾರಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ವಿಶ್ವದ ನಂ.125ನೇ ಆಟಗಾರ್ತಿ ವಾಂಗ್ ಯಫಾನ್‌ರನ್ನು ಎದುರಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದ್ದಾರೆ.

ತವರಿನ ವಾತಾವರಣ ಹೆಚ್ಚಿನ ವ್ಯತ್ಯಾಸ ಉಂಟು ಮಾಡದು ಎಂದಿರುವ ಭಾರತದ ನಾಯಕಿ ಅಂಕಿತಾ ಭಾಂಬ್ರಿ,‘‘ನಮ್ಮ ಇಬ್ಬರು ಆಟಗಾರ್ತಿಯರು ಮೂರು ದಿನಗಳಿಂದ ಚೆನ್ನಾಗಿ ಅಭ್ಯಾಸ ನಡೆಸಿದ್ದಾರೆ. ಹೆಚ್ಚಿನ ಆಟಗಾರ್ತಿಯರು ಇಲ್ಲಿ ಕಡಿಮೆ ಪಂದ್ಯ ಆಡಿದ್ದು, ಹಾಗಾಗಿ ತವರಿನ ವಾತಾವರಣದಿಂದ ಏನೂ ವ್ಯತ್ಯಾಸವಾಗುವುದಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News