ಹಂದಾಡಿಯಲ್ಲಿ ಅಕ್ರಮ ಮರಳು ಅಡ್ಡೆಗೆ ದಾಳಿ: 8 ಲಾರಿ, 17 ದೋಣಿ ಸಹಿತ 41 ಮಂದಿ ಸೆರೆ

Update: 2018-02-07 16:06 GMT

ಬ್ರಹ್ಮಾವರ, ಫೆ.7: ಹಂದಾಡಿ ಗ್ರಾಪಂ ವ್ಯಾಪ್ತಿಯ ಮರ್ಗೋ ಎಂಬಲ್ಲಿರುವ ಸೀತಾನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಇಂದು ಬೆಳಗ್ಗೆ 8:30ರ ಸುಮಾರಿಗೆ ದಾಳಿ ನಡೆಸಿದ ಕುಂದಾಪುರ ಸಹಾಯಕ ಆಯುಕ್ತ ಭೂಬಾಲನ್ ನೇತೃತ್ವದ ಅಧಿಕಾರಿಗಳ ತಂಡ 41 ಮಂದಿ ಕಾರ್ಮಿಕರನ್ನು ಬಂಧಿಸಿ, 8 ಟಿಪ್ಪರ್ ಮತ್ತು 17ದೋಣಿಗಳನ್ನು ವಶಪಡಿಸಿಕೊಂಡಿದೆ.

ಕಳೆದ ಕೆಲವು ಸಮಯಗಳಿಂದ ಸೀತಾನದಿಯಲ್ಲಿ ಹಂದಾಡಿ ಗ್ರಾಪಂ ಸದಸ್ಯ ತಿಮ್ಮಪ್ಪ ಶೆಟ್ಟಿ, ಸ್ಥಳೀಯರಾದ ಫೆಲಿಕ್ಸ್ ಡಯಾಸ್, ಕರುಣಾಕರ್, ಸದಾಶಿವ, ಬಸವ, ಸುಧೀರ್ ಕುಮಾರ್, ರವಿರಾಜ್, ಸಂತೋಷ್ ಹೆಗ್ಡೆ, ಸರ್ವೋತ್ತಮ ಎಂಬವರು ಅಕ್ರಮವಾಗಿ ಬ್ಲಾಕ್‌ಗಳನ್ನು ರಚಿಸಿ ಮರಳುಗಾರಿಕೆ ನಡೆಸುತ್ತಿದ್ದರೆ ನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿಯಂತೆ ಸಹಾಯಕ ಆಯುಕ್ತ ಭೂಬಾಲನ್ ಕಂದಾಯ ಅಧಿಕಾರಿ ಹಾಗೂ ಬ್ರಹ್ಮಾವರ ಪೊಲೀಸರ ಜೊತೆಗೂಡಿ ಇಲ್ಲಿನ 9 ಅಕ್ರಮ ಬ್ಲಾಕ್‌ಗಳಿಗೆ ದಾಳಿ ನಡೆಸಿದರು. ಈ ವೇಳೆ ನದಿಯಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ಮರಳು ತುಂಬಿದ ಎಂಟು ಲಾರಿ ಹಾಗೂ 17 ದೋಣಿ ಮತ್ತು ಒಟ್ಟು 14 ಮೆಟ್ರಿಕ್ ಟನ್ ಮರಳನ್ನು ಅಧಿಕಾರಿಗಳು ವಶಪಡಿಸಿಕೊಂಡರು.

ಈ ಸಂದರ್ಭ ಸ್ಥಳದಲ್ಲಿದ್ದ ಬ್ಲಾಕ್‌ನ ಮಾಲಕರಾದ ಸ್ಥಳೀಯ ಗ್ರಾಪಂ ಸದಸ್ಯ ತಿಮ್ಮಪ್ಪ ಶೆಟ್ಟಿ ಹಾಗೂ ಕರುಣಾಕರ ಶೆಟ್ಟಿ ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತ್ತೆನ್ನಲಾಗಿದೆ. ಈ ಪ್ರಕರಣದಲ್ಲಿ ತಿಮ್ಮಪ್ಪ ಶೆಟ್ಟಿ ಹಾಗೂ 8 ಮಂದಿ ಬ್ಲಾಕ್‌ನ ಮಾಲಕರು ಸಹಿತ 25 ಮಂದಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್, ಎಸ್ಸೈ ಮಧು ಮೊದಲಾದವರು ಹಾಜರಿದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಪರಿಶೀಲನೆ ನಡೆಸಿದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News