ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯಿಂದ ತಲಾಖ್ ಕುರಿತು ಜಾಗೃತಿ ಅಭಿಯಾನ: ಮೌಲಾನ ರಾಬೆಅ ನದ್ವಿ

Update: 2018-02-07 08:13 GMT

ಭಟ್ಕಳ, ಫೆ.7: ಇಸ್ಲಾಮೀ ಶರೀಅತ್‌ನಂತೆ ಸರಿಯಾದ ಕ್ರಮದಲ್ಲಿ ತಲಾಖ್ ಪ್ರಕ್ರಿಯೆ ಬಳಕೆಯಾಗುವಂತೆ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ದೇಶಾದ್ಯಂತ ಅಭಿಯಾನ ನಡೆಸಲು ತೀರ್ಮಾನಿಸಿದೆ ಎಂದು ಮುಸ್ಲಿಮ್ ವೈಯುಕ್ತಿಕ ಕಾನೂನು ಮಂಡಳಿಯ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಮುಹಮ್ಮದ್ ರಾಬೆಅ ಹಸನಿ ನದ್ವಿ ತಿಳಿಸಿದ್ದಾರೆ.

ಭಟ್ಕಳದ ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯಲ್ಲಿ ಮೌಲಾನ ಅಲಿಮಿಯಾ ನದ್ವಿಯವರ ಕುರಿತ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ತಲಾಖ್ ಕುರಿತಂತೆ ಮುಸ್ಲಿಮರಲ್ಲಿ ಗೊಂದಲವಿದೆ. ಕೆಲವೆಡೆ ಶರೀಅತ್ ಬಗ್ಗೆ ಅರಿವಿಲ್ಲದವರು ತಲಾಖ್ ಅನ್ನು ತಮ್ಮ ಮನಸ್ಸೋ ಇಚ್ಛೆ ಬಳಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಜನರಿಗೆ ತಲಾಖ್‌ನ ಸರಿಯಾದ ನಿಯಮಗಳನ್ನು ತಿಳಿಸುವುದು ಇಂದಿನ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪರ್ಸನಲ್ ಲಾ ಬೋರ್ಡ್ ಅಭಿಯಾನ ನಡೆಸುವುದರ ಮೂಲಕ ತಲಾಖ್ ಕುರಿತಂತ ಜನರಲ್ಲಿ ಜಾಗೃತಿಯನ್ನುಂಟು ಮಾಡಲಿದೆ ಎಂದು ಅವರು ಹೇಳಿದರು.

ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮೊದಲು ಒಂದು ತಲಾಖ್ ಹೇಳುವುದು, ಒಂದು ತಿಂಗಳ ನಂತರ ಎರಡನೇ ಬಾರಿ ತಲಾಖ್ ಹೇಳುವುದು. ಈ ಅವಧಿಯಲ್ಲಿ ಪತಿ-ಪತ್ನಿಯರಲ್ಲಿ ಹೊಂದಾಣಿಕೆ ಸಾಧ್ಯವಾದರೆ ಇಬ್ಬರೂ ಮತ್ತೆ ಒಟ್ಟಿಗೆ ಜೀವಿಸಲು ಅವಕಾಶವಿದೆ. ಹೊಂದಾಣಿಕೆ ಸಾಧ್ಯವಿಲ್ಲ ಎಂದಾದರೆ ಕೊನೆಗೆ ಮೂರನೇ ತಲಾಖ್ ಹೇಳುವುದರ ಮೂಲಕ ಅವರು ಪರಸ್ಪರ ವೈವಾಹಿಕ ಬಂಧನದಿಂದ ಬೇರ್ಪಡುವರು. ಇದೇ ಇಸ್ಲಾಮೀ ಶರೀಅತ್ ನಲ್ಲಿ ತಲಾಖ್ ಹೇಳುವ ಸರಿಯಾದ ನಿಯಮ. ಈ ಕುರಿತಂತೆ ಜನರಲ್ಲಿನ ಗೊಂದಲ ನಿವಾರಣೆ ಮಾಡಲಾಗುವುದು. ತಲಾಖ್‌ನ ಸರಿಯಾದ ಕ್ರಮದ ಕುರಿತಂತೆ ಜನರಿಗೆ ಮಾಹಿತಿ ನೀಡಿ ತಲಾಖ್ ದುರುಪಯೋಗವಾದಂತೆ ನೋಡಿಕೊಳ್ಳುವುದು ಎಂದು ಮೌಲಾನ ರಾಬೆಅ ನದ್ವಿ ಎಂದರು.

ಲೋಕಸಭೆಯಲ್ಲಿ ಮಂಡನೆಯಾದ ತ್ರಿವಳಿ ತಲಾಖ್ ಮಸೂದೆ ಕುರಿತಂತೆ ಮಾತನಾಡಿದ ಮೌಲಾನ ರಾಬೆಅ ನದ್ವಿ, ಇದನ್ನು ಮಹಿಳೆಯ ಅನುಕಂಪ, ಸಹಾನುಭೂತಿಯ ಹೆಸರಲ್ಲಿ ಮಂಡನೆ ಮಾಡಲಾಗಿದೆ. ಇದರ ಒಳಹೊಕ್ಕು ನೋಡಿದರೆ ಈ ಮಸೂದೆಯಿಂದ ಮುಸ್ಲಿಮ್ ಮಹಿಳೆಯರು ಸಾಕಷ್ಟು ಸಂಕಟ ಮತ್ತು ತೊಂದರೆಯನ್ನೇ ಅನುಭವಿಸಲಿದ್ದಾರೆ. ವಾತ್ಸವದಲ್ಲಿ ಈ ಮಸೂದೆ ಅವೈಜ್ಞಾನಿಕವಾಗಿದ್ದು, ಇದರಿಂದ ಯಾರಿಗೂ ಕಿಂಚಿತ್ತೂ ಲಾಭವಾಗದು ಎಂದರು.

ಸಿನೆಮಾ, ಟಿ.ವಿ ಜಾಹೀರಾತುಗಳ ಮೂಲಕ ಇತಿಹಾಸವನ್ನು ತಿರುಚುವ ಮತ್ತು ಇಸ್ಲಾಮ್ ಧರ್ಮವನ್ನು ಅವಹೇಳನ ಗೈಯುವ ವಿಚಾರದ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮೌಲಾನ, ಸಿನೆಮಾ ಟಿವಿ ಸಿರಿಯಲ್ ಗಳ ಮೂಲಕ ಇಸ್ಲಾಮನ್ನು ತಪ್ಪಾಗಿ ಅರ್ಥೈಸಲಾಗುತ್ತಿದ್ದು, ಅವರನ್ನು ತಡೆಯುವುದು ಅಷ್ಟು ಸುಲಭವಲ್ಲ. ಇದಕ್ಕೆ ಬದಲು ಅವರು ತಪ್ಪು ಸಂದೇಶ ನೀಡುವ ಕೆಲಸ ಮಾಡುತ್ತಿದ್ದರೆ ನಾವು ಅದೇ ಸಂಪನ್ಮೂಲಗಳನ್ನು ಬಳಸಿಕೊಂಡು ನಮ್ಮ ಚಿಂತಕರು, ಸಾಹಿತಿಗಳು ಸರಿಯಾದ ಸಂದೇಶವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು. 

ಮಾಧ್ಯಮಗಳ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮೌಲಾನ, ಜಗತ್ತನ್ನು ಎರಡು ವಸ್ತುಗಳು ಆಳುತ್ತಿವೆ. ಒಂದು ಹಣ. ಮತ್ತೊಂದು ಮಾಧ್ಯಮ. ಜಗತ್ತಿನ ದೈತ್ಯ ಶಕ್ತಿಗಳು ತಮ್ಮ ಹಣಬಲದಿಂದಾಗಿ ಬಡರಾಷ್ಟ್ರಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿವೆ. ಹಣವಂತರ ಕೈಗೊಂಬೆಗಳಂತೆ ವರ್ತಿಸುತ್ತಿರುವ ಮಾಧ್ಯಮಗಳು ಜನರ ಅಭಿಪ್ರಾಯವನ್ನು ರೂಪಿಸಲು ಬಳಸಿಕೊಳ್ಳಲಾಗುತ್ತಿದೆ. ಮಾಧ್ಯಮ ರಂಗದಲ್ಲಿ ಮುಸ್ಲಿಮರ ಪ್ರಮಾಣ ಕಡಿಮೆಯಿದೆ. ಈ ಕ್ಷೇತ್ರದಲ್ಲಿ ಯುವಕರು ತೊಡಗಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News