ನ್ಯಾಯಕ್ಕಾಗಿ ಬೀದಿಗಿಳಿದ 12 ಸಿಆರ್‌ಪಿಎಫ್ ಯೋಧರನ್ನು ರಕ್ಷಿಸಿದ್ದ ಮುಹಮ್ಮದ್ ರಫೀಕ್

Update: 2018-02-07 16:07 GMT

ಜಮ್ಮು ಮತ್ತು ಕಾಶ್ಮೀರ, ಫೆ.7: ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಉಪಚುನಾವಣೆಯ ವೇಳೆ ಉಗ್ರರ ದಾಳಿಯಿಂದ 12 ಸಿಆರ್‌ಪಿಎಫ್ ಯೋಧರನ್ನು ರಕ್ಷಿಸಿ ಸಾಹಸ ಮೆರೆದ ಮುಹಮ್ಮದ್ ರಫೀಕ್ ಕುಶುವನ್ನು ಇಡೀ ದೇಶವೇ ಹೀರೊ ಎಂದು ಕೊಂಡಾಡಿತ್ತು.

ಇಂದು ಕೈಯಲ್ಲೊಂದು ಫಲಕವನ್ನು ಹಿಡಿದುಕೊಂಡಿರುವ ರಫೀಕ್ ರನ್ನು ನೊಯ್ಡದ ಫಿಲ್ಮ್ ಸಿಟಿಯ ರಸ್ತೆಗಳಲ್ಲಿ ಕಾಣಬಹುದು. ಆ ಫಲಕದಲ್ಲಿ, ನನಗೆ ನ್ಯಾಯ ಬೇಕು. ನಾನು 12 ಸಿಆರ್‌ಪಿಎಫ್ ಜವಾನರನ್ನು ರಕ್ಷಿಸಿದ್ದೇನೆ. ಆದರೆ ನನಗೆ ಸಿಕ್ಕಿದ್ದು ಬರೀ ಕಡಲೆಕಾಯಿ ಎಂದು ಬರೆಯಲಾಗಿದೆ. ಕುಶು ಅವರ ಸಾಹಸಕ್ಕೆ ಬಹುಮಾನವಾಗಿ ಜಮ್ಮು ಮತ್ತು ಕಾಶ್ಮೀರ ಸರಕಾರವು ಅವರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ ಅದು ಈಗಲೂ ಭರವಸೆಯಾಗಿಯೇ ಉಳಿದಿದೆ. ತಾನು ರಾಜ್ಯದ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರನ್ನು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಪ್ರಯತ್ನಿಸಿದರೂ ಅದು ಯಾವುದೂ ಸಾಧ್ಯವಾಗಲಿಲ್ಲ ಎಂದು ಕುಶು ಬೇಸರ ವ್ಯಕ್ತಪಡಿಸುತ್ತಾರೆ.

2017ರ ಎಪ್ರಿಲ್ 7ರಂದು ಕುಶು ಸಿಆರ್‌ಪಿಎಫ್ ತಂಡವನ್ನು ಚುನಾವಣಾ ಕರ್ತವ್ಯಕ್ಕೆಂದು ಕೊಂಡೊಯ್ಯುತ್ತಿದ್ದ ವೇಳೆ ಅವರ ಕಾರಿನ ಮೇಲೆ ಉಗ್ರರು ದಾಳಿ ನಡೆಸಿದ್ದರು. ತನಗೆ ಗುಂಡೇಟು ತಗುಲಿದ್ದರೂ ಕುಶು ಕಾರನ್ನು ದಾಳಿಕೋರರಿಂದ ದೂರಕ್ಕೆ ಕೊಂಡೊಯ್ಯುವ ಮೂಲಕ ಯೋಧರ ಪ್ರಾಣವನ್ನು ಉಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News