ಮೋದಿ-ಖರ್ಗೆ ಮಧ್ಯೆ ಕವಿ ಬಶೀರ್ ಬದ್ರ್ ಕವಿತೆ ಸಮರ

Update: 2018-02-07 17:00 GMT

ಹೊಸದಿಲ್ಲಿ, ಫೆ.7: ಲೋಕಸಭೆಯಲ್ಲಿ ಹಲವು ಬಾರಿ ವಾಕ್ಸಮರದ ಮಧ್ಯೆ ಕವಿತೆಗಳು, ಹಾಸ್ಯ ಚಟಾಕಿಗಳು, ಕತೆಗಳು ಇಣುಕಿ ಹೋಗುತ್ತವೆ. ಇವು ತೀವ್ರ ಉದ್ವಿಗ್ನಗೊಂಡಿರುವ ಸದನದ ವಾತಾವರಣವನ್ನು ತಿಳಿಗೊಳಿಸುತ್ತವೆ.

ಮಂಗಳವಾರ ಮತ್ತು ಬುಧವಾರದಂದೂ ಇಂಥದ್ದೊಂದು ವಿದ್ಯಮಾನ ನಡೆಯಿತು.

ಮಂಗಳವಾರದಂದು ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಖ್ಯಾತ ಉರ್ದು ಕವಿ ಬಶೀರ್ ಬದ್ರ್ ಅವರ ಕವಿತೆಯ ಸಾಲುಗಳನ್ನು ಉಲ್ಲೇಖಿಸಿದ್ದರು. “ಶತ್ರುತ್ವವನ್ನು ಬೇಕಾದರೆ ಮಾಡಿ. ಆದರೆ ಒಂದು ನೆನಪಿರಲಿ ಮುಂದೊಮ್ಮೆ ನಾವು ಗೆಳೆಯರಾದಾಗ ನಾಚಿಕೆಯಾಗುವಂತಾಗದಿರಲಿ” ಎಂದು ಬದ್ರ್ ಅವರು ಬರೆದಿರುವ ಸಾಲುಗಳನ್ನು ಖರ್ಗೆ ಉಲ್ಲೇಖಿಸಿದ್ದರು.

ಬುಧವಾರದಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳಿಗೆ ಧನ್ಯವಾದ ಸಮರ್ಪಿಸುವ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಬಶೀರ್ ಬದ್ರ್ ಅವರ ಅದೇ ಕವಿತೆಯ ಮುಂದಿನ ಸಾಲುಗಳನ್ನು ಉಲ್ಲೇಖಿಸಿದರು. “ಸತ್ಯ ಹೇಳಲು ಮನಸ್ಸು ತುಡಿಯುತ್ತಿದೆ. ಆದರೆ ಏನು ಮಾಡುವುದು ಧೈರ್ಯವಿಲ್ಲ” ಎಂಬ ಸಾಲುಗಳನ್ನು ಉಲ್ಲೇಖಿಸಿದ ಮೋದಿ ಬಹುಶಃ ಖರ್ಗೆಯವರು ಈ ಸಾಲುಗಳನ್ನು ಹೇಳಲು ಮರೆತಿದ್ದಾರೆ ಎಂದು ವ್ಯಂಗ್ಯವಾಡಿದರು.

ಖರ್ಗೆಯವರು ಹೇಳಿರುವ ಕವಿತೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏನಾದರೂ ಪಾಠ ಕಲಿತಿದ್ದಾರೆಯೇ ಎಂದೂ ಪ್ರಧಾನಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News