ರಾಹುಲ್ ನನ್ನ ಬಾಸ್ ಕೂಡ ಹೌದು ಎಂದ ಸೋನಿಯಾ ಗಾಂಧಿ

Update: 2018-02-08 08:53 GMT

ಹೊಸದಿಲ್ಲಿ, ಫೆ. 8: ‘‘ಹಾಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನನ್ನ ಬಾಸ್ ಕೂಡ ಹೌದು, ಅದರಲ್ಲಿ ಯಾವುದೇ ಸಂಶಯ ಬೇಡ’’ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

‘‘ಕಾಂಗ್ರೆಸ್ ಪಕ್ಷಕ್ಕೆ ಒಬ್ಬರು ಹೊಸ ಅಧ್ಯಕ್ಷರಿದ್ದಾರೆ. ನಿಮ್ಮ ಹಾಗೂ ನನ್ನ ಪರವಾಗಿ ಅವರಿಗೆ ನಾನು ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ,’’ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ ಬುಧವಾರ ನಡೆದಾಗ ಸೋನಿಯಾ ಹೇಳಿದರು.

ಕೇಂದ್ರದ ನರೇಂದ್ರ ಮೋದಿ ಸರಕಾರವು ಗರಿಷ್ಠ ಪ್ರಚಾರ ಮತ್ತು ಕನಿಷ್ಠ ಕೆಲಸ, ಗರಿಷ್ಠ ಮಾರ್ಕೆಟಿಂಗ್ ಹಾಗೂ ಕನಿಷ್ಠ ಜಾರಿಯಲ್ಲಿ ತೊಡಗಿದೆ’’ ಎಂದು ಸೋನಿಯಾ ಹೇಳಿದರು.

ಪ್ರಜಾತಂತ್ರದ ವಿವಿಧ ಸಂಸ್ಥೆಗಳ ಮೇಲೆ ವ್ಯವಸ್ಥಿತ ಹಲ್ಲೆ ನಡೆಯುತ್ತಿದೆ, ತನಿಖಾ ಏಜನ್ಸಿಗಳನ್ನು ರಾಜಕೀಯ ಎದುರಾಳಿಗಳನ್ನು ಸದೆಬಡಿಯಲು ಬಳಸಲಾಗುತ್ತಿದೆ,’’ ಎಂದು ಅವರು ದೂರಿದರು.

‘‘ದಲಿತರ ಹಾಗೂ ಅಲ್ಪಸಂಖ್ಯಾತರ ವಿರುದ್ಧದ ಹಿಂಸೆಗಳು ಸ್ವಯಂಪ್ರೇರಿತವಲ್ಲ, ಬದಲಾಗಿ ವ್ಯವಸ್ಥಿತ, ಸಮಾಜವನ್ನು ಧ್ರುವೀಕರಿಸಿ ರಾಜಕೀಯ ಲಾಭ ಪಡೆಯುವ ಯತ್ನವಿದೆ’’ ಎಂದು ಸೋನಿಯಾ ಹೇಳಿದರು.

ರಾಜಸ್ಥಾನ ಉಪಚುನಾವಣೆ ಹಾಗೂ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ನಿರ್ವಹಣೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಸೋನಿಯಾ ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧರಾಗಿರುವಂತೆಯೂ ಪಕ್ಷದ ನಾಯಕರಿಗೆ ಕರೆ ನೀಡಿದರು.

‘‘2014ರಲ್ಲಿ ನಮಗೆ ಹಿನ್ನಡೆಯಾಗಿದೆ ನಿಜ, ಆದರೆ ಅದೊಂದು ಅಸ್ವಾಗತಾರ್ಹ ಬೆಳವಣಿಗೆಯಾಗಿತ್ತು’’ ಎಂದ ಸೋನಿಯಾ, ರಾಫೇಲ್ ಒಪ್ಪಂದದ ಬಗ್ಗೆ ಸರಕಾರ ತೋರಿಸುತ್ತಿರುವ ಗೌಪ್ಯತೆಯನ್ನೂ ಪ್ರಶ್ನಿಸಿದರು. ಕೇಂದ್ರ ಬಜೆಟ್ ಅನ್ನೂ ಟೀಕಿಸಿದ ಅವರು ಅದು ಜುಮ್ಲಾಗಳಿಂದ ಕೂಡಿದೆ ಎಂದರು.

ಈ ಸಂದರ್ಭ ಪ್ರಧಾನಿಯ ಆಲಿಂಗನ ರಾಜತಾಂತ್ರಿಕತೆಯನ್ನೂ ಟೀಕಿಸಿದ ಸೋನಿಯಾ, ‘‘ಸಾರ್ವಜನಿಕವಾಗಿ ಆಲಿಂಗನ ಹಾಗೂ ವೈಯಕ್ತಿಕ ನೆಲೆಯ ರಾಜತಾಂತ್ರಿಕತೆಯನ್ನು ಒಪ್ಪಬಹುದಾದರೂ ಸಾಂಸ್ಥಿಕ ಪ್ರಕ್ರಿಯೆ, ಕಠಿಣ ಶ್ರಮ ಹಾಗೂ ಸೂಕ್ತ ತಯಾರಿಗೆ ಪರ್ಯಾಯವಿಲ್ಲ, ನಮ್ಮ ರಾಷ್ಟ್ರೀಯ ನೀತಿಗಳ ಮುಂದುವರಿಕೆಗೆ ಇದು ಅಗತ್ಯ’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News