ಸದ್ಯಕ್ಕೆ ಯಾವುದೇ ಮಧ್ಯಪ್ರವೇಶ ಅರ್ಜಿಗಳಿಗೆ ಅವಕಾಶವಿಲ್ಲ: ಸುಪ್ರೀಂ

Update: 2018-02-08 14:03 GMT

ಹೊಸದಿಲ್ಲಿ,ಫೆ.8: ಅಯೋಧ್ಯೆ ವಿವಾದ ಪ್ರಕರಣದ ವಿಚಾರಣೆ ಗುರುವಾರ ಪುನರಾರಂಭಗೊಂಡಿದ್ದು, ಯಾವುದೇ ಮಧ್ಯಪ್ರವೇಶ ಅರ್ಜಿಗಳನ್ನು ತಾನು ಸದ್ಯಕ್ಕೆ ಅಂಗೀಕರಿಸುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಹೇಳಿದೆ. ತಾವು ಹಾಜರು ಪಡಿಸಿದ್ದ ದಾಖಲೆಗಳ ಇಂಗ್ಲೀಷ್ ಭಾಷಾಂತರವನ್ನು ಎರಡು ವಾರಗಳಲ್ಲಿ ತನಗೆ ಸಲ್ಲಿಸುವಂತೆ ಅದು ಪ್ರಕರಣದಲ್ಲಿನ ಎಲ್ಲ ಕಕ್ಷಿದಾರರಿಗೆ ನಿರ್ದೇಶ ನೀಡಿದೆ.

ಮಾ.14ರಂದು ಮೇಲ್ಮನವಿಗಳ ವಿಚಾರಣೆಯನ್ನು ನಡೆಸುವುದಾಗಿ ತಿಳಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ವಿಶೇಷ ಪೀಠವು, ಪ್ರಕರಣದ ದೈನಂದಿನ ವಿಚಾರಣೆಯನ್ನು ನಡೆಸಲು ತಾನೆಂದೂ ಉದ್ದೇಶಿಸಿರಲಿಲ್ಲ ಎಂದು ಸ್ಪಷ್ಟಪಡಿಸಿತು.

ಪ್ರಕರಣವನ್ನು ‘ಶುದ್ಧ ಭೂ ವಿವಾದ’ವನ್ನಾಗಿ ತಾನು ನಿರ್ವಹಿಸುವುದಾಗಿ ಮತ್ತು ಅಲಹಾಬಾದ್ ಉಚ್ಚ ನ್ಯಾಯಾಲಯದಲಿ ಪ್ರಕರಣದಲ್ಲಿ ಕಕ್ಷಿದಾರರಲ್ಲದವರ ಅರ್ಜಿಗಳನ್ನು ನಂತರದ ದಿನಾಂಕದಲ್ಲಿ ಕೈಗೆತ್ತಿಕೊಳ್ಳುವುದಾಗಿ ನ್ಯಾಯಮೂರ್ತಿಗಳಾದ ಅಶೋಕ ಭೂಷಣ್ ಮತ್ತು ಎಸ್.ಎ.ನಝೀರ್ ಅವರನ್ನೂ ಒಳಗೊಂಡ ಪೀಠವು ತಿಳಿಸಿತು.

ಉಚ್ಚ ನ್ಯಾಯಾಲಯದ ದಾಖಲೆಗಳ ಭಾಗವಾಗಿರುವ ವೀಡಿಯೊ ಕ್ಯಾಸೆಟ್‌ಗಳ ಪ್ರತಿಗಳನ್ನು ಎಲ್ಲ ಕಕ್ಷಿದಾರರಿಗೆ ವಾಸ್ತವ ವೆಚ್ಚದಲ್ಲಿ ಒದಗಿಸುವಂತೆ ಅದು ನ್ಯಾಯಾಲಯದ ರಿಜಿಸ್ಟ್ರಿಗೆ ನಿರ್ದೇಶ ನೀಡಿತು.

ನಾಲ್ಕು ಸಿವಿಲ್ ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪನ್ನು ಪ್ರಶ್ನಿಸಿರುವ ಒಟ್ಟು 14 ಮೇಲ್ಮನವಿಗಳು ಸರ್ವೋಚ್ಚ ನ್ಯಾಯಾಲಯದ ವಿಶೇಷ ಪೀಠದ ಮುಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News